ಖಾದ್ಯ ತೈಲ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ: ನಾಲ್ಕು ತಿಂಗಳಲ್ಲಿ 15-25ರೂ ಪ್ರತಿ ಲೀಟರ್ ಇಳಿಕೆ

ನವದೆಹಲಿ: ದಿನನಿತ್ಯದ ಅಡುಗೆ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ನಿರುಮ್ಮಳತೆಯನ್ನು ತಂದುಕೊಟ್ಟಿದೆ. ಸರಕಾರದ ಡೇಟಾಗಳ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಯು ಪ್ರತಿ ಲೀಟರಿಗೆ 15-25ರೂ ಗಳಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಇಂಡೋನೇಷ್ಯಾವು ಆಗಸ್ಟ್ 31 ರವರೆಗೆ ಎಲ್ಲಾ ತಾಳೆ ಎಣ್ಣೆ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕುವುದರೊಂದಿಗೆ, ಭಾರತದ ಖಾದ್ಯ ತೈಲ ತಯಾರಕರು ಇಳಿಕೆಯಾದ ಜಾಗತಿಕ ಬೆಲೆಗಳ ಪ್ರಯೋಜನಗಳನ್ನು ಅಂತಿಮ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ರೂ 15 ರಷ್ಟು ಕಡಿಮೆ ಮಾಡಲು ಸರ್ಕಾರವು ಉದ್ಯಮಗಳನ್ನು ಕೇಳುತ್ತಿದ್ದು, ತಿದ್ದುಪಡಿಯು ಮುಂದಿನ ತಿಂಗಳ ಆರಂಭದೊಳಗೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಳೆದ ತಿಂಗಳು, ಅದಾನಿ ವಿಲ್ಮಾರ್, ಮದರ್ ಡೈರಿ ಮತ್ತು ಇಮಾಮಿ ಆಗ್ರೊಟೆಕ್ ಸೇರಿದಂತೆ ಹಲವಾರು ಭಾರತೀಯ ಖಾದ್ಯ ತೈಲ ಉತ್ಪಾದಕರು ಎಲ್ಲಾ ತೈಲ ವರ್ಗಗಳಲ್ಲಿ 10-15 ರೂಪಾಯಿಗಳ ಬೆಲೆ ಕಡಿತವನ್ನು ಜಾರಿಗೆ ತಂದಿದ್ದಾರೆ.

ಜುಲೈ 15 ರ ಮೊದಲು ಪ್ರಾರಂಭವಾದ ಯಾವುದೇ ಸಾಗಣೆಯು ಜುಲೈ 25 ರಂದು ಭಾರತೀಯ ತೀರವನ್ನು ತಲುಪಲಿರುವುದರಿಂದ ಈ ತಿಂಗಳು ಬೆಲೆಗಳಲ್ಲಿ ಬದಲಾವಣೆ ಕಂಡುಬರದಿದ್ದರೂ ಆಗಸ್ಟ್ ತಿಂಗಳಿನಿಂದ ಬೆಲೆ ಇಳಿಕೆಯ ಪರಿಣಾಮ ಗೋಚರವಾಗಲಿದೆ ಎನ್ನಲಾಗಿದೆ.