ನವದೆಹಲಿ: ಕಾಂಗ್ರೆಸ್ ಪಕ್ಷದ ಒಡೆತನದ ಮತ್ತು ಪಕ್ಷ ನಡೆಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
2013 ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಐಟಿ ತನಿಖೆ ನಡೆಸಲಾಗುತ್ತಿದೆ.
ಪತ್ರಿಕೆಯ ಸ್ವಾಧೀನ ಪಡಿಸುವ ಪ್ರಕ್ರಿಯೆಯಲ್ಲಿ ಗಾಂಧಿಯವರ ಕಡೆಯಿಂದ ವಂಚನೆ ಮತ್ತು ಹಣದ ದುರುಪಯೋಗವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 86 ರಷ್ಟು ಪಾಲನ್ನು ಹೊಂದಿರುವ ಯಂಗ್ ಇಂಡಿಯನ್ ಮುಖಾಂತರ ಪತ್ರಿಕೆಯ ಹಿಂದಿನ ಪ್ರಕಾಶಕರನ್ನು ಖರೀದಿಸುವ ಮೂಲಕ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಒಡೆತನದ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು.
ಈ ಕೇಸಿಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.












