ಮೌಲ್ಯದ 70 ಆಸ್ತಿಗಳ ಜಪ್ತಿ ಮಾಡಿದ ಇಡಿ : ಎನ್‌ಸಿಪಿ ಮಾಜಿ ಸಂಸದರಿಗೆ ಸೇರಿದ 315 ಕೋಟಿ ರೂ. !

ನವದೆಹಲಿ: ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ ಮತ್ತು ಕುಟುಂಬ ಹಾಗೂ ಇವರ ವ್ಯಾಪಾರಕ್ಕೆ ಸೇರಿದ 315 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ತಿಳಿಸಿದೆ.ಇದರಲ್ಲಿ ಜಾಮೀನು, ಪವನ ಘಟಕಗಳು, ಬೆಳ್ಳಿ, ಚಿನ್ನ ಮತ್ತು ವಜ್ರದ ಆಭರಣಗಳು ಸೇರಿವೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.ಎನ್‌ಸಿಪಿ ಮಾಜಿ ಸಂಸದ ಈಶ್ವರಲಾಲ್​ ಶಂಕರಲಾಲ್​ ಜೈನ್ ಲಾಲ್ವಾನಿ, ಕುಟುಂಬ ಹಾಗೂ ಇವರ ವ್ಯಾಪಾರಕ್ಕೆ ಸೇರಿದ 315 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಕೆಲವು ಪವನ ಘಟಕಗಳ ಹೊರತಾಗಿ ಮಹಾರಾಷ್ಟ್ರದ ಜಲಗಾಂವ್, ಮುಂಬೈ, ಥಾಣೆ, ಸಿಲ್ಲೋಡ್​,ಗುಜರಾತ್​ನ ಕಚ್​ನಲ್ಲಿರುವ ಘಟಕ, ಬೆಳ್ಳಿ ಮತ್ತು ವಜ್ರ, ಚಿನ್ನಾಭರಣ ಹಾಗೂ ನಗದು ಸೇರಿದಂತೆ 70 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಈಶ್ವರಲಾಲ್ ಜೈನ್ ಲಾಲ್ವಾನಿ, ಮನೀಶ್ ಈಶ್ವರಲಾಲ್ ಜೈನ್ ಲಾಲ್ವಾನಿ ಮತ್ತು ಇತರರು ಸಂಪಾದಿಸಿದ ಬೇನಾಮಿ ಆಸ್ತಿಗಳೂ ಸೇರಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಈ ಕಂಪನಿಗಳು ಮತ್ತು ನಿರ್ದೇಶಕರು, ಪ್ರವರ್ತಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 352.49 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ದೂರು ನೀಡಿದೆ. ಇದರ ಆಧಾರದ ಮೇಲೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದ್ದು, ಬ್ಯಾಂಕ್​ ಸಾಲಗಳನ್ನು ಪಡೆಯಲು ಪ್ರವರ್ತಕರು ನಕಲಿ ಆರ್ಥಿಕ ಮೂಲಗಳನ್ನು ಸಲ್ಲಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

ಹಣಕಾಸಿನ ಮೌಲ್ಯವನ್ನು ಹೆಚ್ಚಿಸುವ ವಹಿವಾಟಿನಲ್ಲಿ ತೊಡಗಿದ್ದಾರೆ. ಕಂಪನಿಗಳ ಲೆಕ್ಕಪರಿಶೋಧಕರೊಂದಿಗೆ ಶಾಮೀಲಾಗಿ ರಿಯಲ್​ ಎಸ್ಟೇಟ್​​ ಆಸ್ತಿಗಳಲ್ಲಿನ ಹೂಡಿಕೆಗಾಗಿ ಸಾಲದ ಆದಾಯವನ್ನು ಬಳಕೆ ಮಾಡಿದ್ದಾರೆ. ಇದಕ್ಕಾಗಿ ಕಂಪನಿಗಳ ಖಾತೆಗಳ ಪುಸ್ತಕಗಳಲ್ಲಿ ನಕಲಿ ಮಾರಾಟ ಖರೀದಿ ವಹಿವಾಟುಗಳನ್ನು ತೋರಿಸಿದ್ದಾರೆ ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಆಗಸ್ಟ್‌ನಲ್ಲಿ ದಾಳಿ ನಡೆಸಿತ್ತು. ಮುಖ್ಯ ಹಿಡುವಳಿ ಕಂಪನಿಯಾದ ರಾಜ್ಮಲ್ ಲಖಿಚಂದ್ ಜ್ಯುವೆಲರ್ಸ್, ತನ್ನ ಪಾಲುದಾರಿಕೆ ಸಂಸ್ಥೆಯೊಂದಿಗಿನ ಖಾತೆಗಳ ಪುಸ್ತಕಗಳಲ್ಲಿ ನಕಲಿ ಮಾರಾಟ, ಖರೀದಿ ವಹಿವಾಟುಗಳಂತಹ ವಿವಿಧ ವ್ಯತ್ಯಾಸಗಳು ಪತ್ತೆಯಾಗಿವೆ ಎಂದೂ ತಿಳಿಸಿತ್ತು.

77 ವರ್ಷದ ಈಶ್ವರಲಾಲ್ ಜೈನ್​ ಲಾಲ್ವಾನಿ ಅವರು ರಾಜಮಲ್​ ಲಖಿಚಂದ್​ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಆರ್​ಎಲ್​ ಗೋಲ್ಡ್​​ ಪ್ರೈವೇಟ್​ ಲಿಮಿಟೆಡ್ ಮತ್ತು ಮನರಾಜ್ ಜ್ಯುವೆಲ್ಲರ್ಸ್‌ನ ಪ್ರವರ್ತಕರಾಗಿದ್ದಾರೆ. ಈ ರಾಜಮಲ್​ ಲಖಿಚಂದ್​ ಜ್ಯುವೆಲರ್ಸ್, ಆರ್​ಎಲ್​ ಗೋಲ್ಡ್, ಮನರಾಜ್ ಜ್ಯುವೆಲ್ಲರ್ಸ್​ನ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ತಾತ್ಕಾಲಿಕ ಆದೇಶವನ್ನು ಶುಕ್ರವಾರ ಹೊರಡಿಸಲಾಗಿದೆ ಎಂದು ಇಡಿ ಹೇಳಿದೆ.