ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆಯ ನಂತರ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ ಎನ್ನಲಾಗಿದೆ.
2011 ರಿಂದ 2015 ರ ಎಐಎಡಿಎಂಕೆ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರು ಸಾರಿಗೆ ಸಚಿವರಾಗಿದ್ದಾಗ ಬಾಲಾಜಿಗೆ ಸಂಬಂಧಿಸಿರುವ ಸ್ಥಳಗಳ ಮೇಲೆ ಮಂಗಳವಾರ ಇಡಿ ದಾಳಿ ನಡೆಸಿ ಅವರನ್ನು ಪ್ರಶ್ನಿಸಿದೆ. ಉದ್ಯೋಗಕ್ಕಾಗಿ ನಗದು ಹಗರಣದ ಕುರಿತು ಪೊಲೀಸ್ ಮತ್ತು ಇಡಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ತಿಂಗಳುಗಳ ನಂತರ ಈ ಬೆಳವಣಿಗೆ ನಡೆದಿದೆ.
ಮಂಗಳವಾರ ತಡರಾತ್ರಿ ಬಾಲಾಜಿ ಅವರ ಬಂಧನದ ಬಗ್ಗೆ ಊಹಾಪೋಹಗಳ ನಡುವೆ, ಎದೆಯ ಅಸ್ವಸ್ಥತೆಯ ಬಗ್ಗೆ ದೂರು ನೀಡಿದ ನಂತರ ಸಚಿವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಡಿಎಂಕೆ ನಾಯಕ ನೋವಿನಿಂದ ಮುಖಮುಚ್ಚಿಕೊಂಡು ಅಳುತ್ತಿರುವ ದೃಶ್ಯಗಳು ಕಂಡುಬಂದಿದ್ದು ಆಸ್ಪತ್ರೆಯ ಹೊರಗೆ ಹೈ ಡ್ರಾಮಾ ನಡೆದಿದೆ.
ಇಡಿ ಕ್ರಮದ ವಿರುದ್ಧ ಪ್ರತಿಭಟಿಸಲು ಅವರ ಬೆಂಬಲಿಗರು ಆಸ್ಪತ್ರೆ ಮುಂದೆ ಜಮಾಯಿಸಿದಾಗ ಬಾಲಾಜಿ ಕಾರಿನಲ್ಲಿ ಮಲಗಿ ನೋವಿನಿಂದ ಅಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಅವರನ್ನು ಐಸಿಯುಗೆ ದಾಖಲಿಸಿದ ಕೆಲವೇ ಗಂಟೆಗಳ ನಂತರ ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್ಎಎಫ್) ತಂಡವನ್ನು ಒಮಂದೂರಾರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಿಯೋಜಿಸಲಾಯಿತು.
ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಅವರು ಇದು ಆಡಳಿತಾರೂಢ ಡಿಎಂಕೆಯ “ಹೈ ಡ್ರಾಮಾ” ಎಂದು ಬಣ್ಣಿಸಿದ್ದಾರೆ ಮತ್ತು ಕಾನೂನು ಜಾರಿ ಸಂಸ್ಥೆಯೊಂದಿಗೆ ಸಹಕರಿಸುವುದು ಬಾಲಾಜಿಯ ಕರ್ತವ್ಯ ಎಂದು ಹೇಳಿರುವುದಾಗಿ ಎ.ಎನ್.ಐ ವರದಿ ಮಾಡಿದೆ.