ಉಡುಪಿ: ಮೀನುಗಾರಿಕೆಯಲ್ಲಿ ಆರ್ಥಿಕ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದ ಯುವಕನೊರ್ವ ತನ್ನ ಬೋಟ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಲ್ಪೆ ಬಂದರಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಬಡಾನಿಡಿಯೂರಿನ ಬೈಲಕೆರೆಯ ನಿವಾಸಿ ಭಾಗ್ಯರಾಜ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಭಾಗ್ಯರಾಜ್ ಇತ್ತೀಚೆಗೆ ಸಾಲ ಮಾಡಿಕೊಂಡು ಮೀನುಗಾರಿಕಾ ಬೋಟ್ ವೊಂದನ್ನು ಖರೀದಿಸಿದ್ದನು. ಆದರೆ ಲಾಕ್ ಡೌನ್ ನಿಂದಾಗಿ ಅಷ್ಟಾಗಿ ಮೀನುಗಾರಿಕೆಗೆ ನಡೆಸಲು ಆಗಿಲ್ಲ. ಹಾಗೆ ಮತ್ಸ್ಯ ಕ್ಷಾಮದಿಂದ ಮೀನುಗಾರಿಕಾ ವ್ಯವಹಾರದಲ್ಲಿ ಅಪಾರ ಆರ್ಥಿಕ ನಷ್ಟ ಉಂಟಾಗಿದ್ದು, ಇದರಿಂದ ಮನನೊಂದು ಬಂದರಿನಲ್ಲಿ ಲಂಗರು ಹಾಕಿದ್ದ ಬೋಟಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಭಾಗ್ಯರಾಜ್ ಮೀನುಗಾರಿಕೆಯ ಜತೆಗೆ ಉತ್ತಮ ಕಬಡ್ಡಿ ಪಟುವಾಗಿದ್ದು, ಅನೇಕ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದನು. ಆದರೆ ನಿನ್ನೆ ರಾತ್ರಿ ಏಕಾಏಕಿಯಾಗಿ ಮನೆಯಿಂದ ತೆರಳಿ ಬೋಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.