ಹಲಸಿನ ಮೌಲ್ಯವರ್ಧನೆಯಿಂದ ರೈತರ ಆರ್ಥಿಕ ಸಬಲತೆ ಸಾಧ್ಯ: ಯಶ್ ಪಾಲ್ ಸುವರ್ಣ

ಉಡುಪಿ: ಮಲೆನಾಡು ಸೇರಿದಂತೆ ಕರಾವಳಿ ಭಾಗದ ಪೌಷ್ಠಿಕ ಆಹಾರಗಳಲ್ಲಿ ಒಂದಾದ ಹಲಸು ಇಲ್ಲಿ ಹೇರಳವಾಗಿ ಉತ್ಪತ್ತಿಯಾಗುತ್ತದೆ. ಇದಕ್ಕೆ ಹೆಚ್ಚಿನ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯನ್ನು ಒದಗಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಉಡುಪಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೈ.ಲಿ ಇವರ ಸಂಯುಕ್ತ ಆಶ್ರಯದಲ್ಲಿ ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೈ.ಲಿ ರವರ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಾಣವಾದ ರೈತ ಸೇವಾ ಕೇಂದ್ರದ ಆವರಣದ ಮೇಲ್ಛಾವಣಿಯ ಲೋಕಾರ್ಪಣೆ ಹಾಗೂ ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ , ಹಲಸಿನಿಂದ ವಿವಿಧ ರೀತಿಯ ಖಾದ್ಯ ಉತ್ಪನ್ನಗಳನ್ನು ತಯಾರಿಸಿ ದೇಶ ವಿದೇಶಗಳಿಗೆ ರಫ್ತು ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹಲಸಿನ ಮೇಳಗಳಲ್ಲಿ ವಿವಿಧ ಬಗೆಯ ಹಲಸುಗಳು ಲಭ್ಯವಿದ್ದು, ಜನರು ಸವಿಯಲು ಅನುಕೂಲವಾಗುವುದರ ಜೊತೆಗೆ ರೈತರಿಗೆ ಮಾರುಕಟ್ಟೆ ಸೌಲಭ್ಯ ಒದಗಲಿದೆ. ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೈ.ಲಿ ವತಿಯಿಂದ ಸಾಮಾಜಿಕ ಹೊಣೆಗಾರಿಕ ನಿಧಿಯಿಂದ 48.5 ಲಕ್ಷ ರೂ ವೆಚ್ಚದಲ್ಲಿ ರೈತ ಸೇವಾ ಕೇಂದ್ರದ ಮೇಲ್ಛಾವಣಿ ನಿರ್ಮಿಸಿರುವುದು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ರೋಬೋಸಾಫ್ಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವೀತೇಜ ಬೊಮ್ಮಿರೆಡ್ಡಿ ಪಲ್ಲಿ ಮಾತನಾಡಿ, ನಮ್ಮ ಕಂಪನಿಯ ಮುಖ್ಯ ಕಚೇರಿಯು ಈ ಜಿಲ್ಲೆಯಲ್ಲಿದ್ದು, ಇಲ್ಲಿನ ಅಭಿವೃದ್ಧಿ ಸೇರಿದಂತೆ ಜನಹಿತ ಕಾರ್ಯವನ್ನು ಮಾಡಲು ಕೈ ಜೋಡಿಸಲಿದ್ದೇವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ , ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್ , ರೋಬೋಸಾಫ್ಟ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮತ್ತಿತರರು ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ, ಅಶೋಕ್ ಕಾಮತ್ ನಿರೂಪಿಸಿದರು. ರೋಬೋಸಾಫ್ಟ್ ಕಂಪನಿಯ ಹಣಕಾಸು ವಿಭಾಗದ ನಾಗೇಶ್ ದೊಂಡಿಯ ವಂದಿಸಿದರು.