ಬೆಂಗಳೂರಿಗೆ ಎಂಟ್ರಿ ಕೊಟ್ಟ ಎಬೋಲಾ? ಉಗಾಂಡಾದಿಂದ ಬಂದ ಮಹಿಳೆಗೆ ಸೋಂಕಿನ ಲಕ್ಷಣ,ಹೈ ಅಲರ್ಟ್

ಬೆಂಗಳೂರು: ಉಗಾಂಡಾದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿನ ಶಂಕಿತ ಲಕ್ಷಣಗಳು ಕಂಡುಬಂದ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಹಿಳೆಯನ್ನು ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರತ್ಯೇಕ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇದುವರೆಗೆ ಭಾರತದಲ್ಲಿ ಎಬೋಲಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಉಗಾಂಡಾದ ಕ್ಯಾಂಪಾಲಾ ನಿವಾಸಿಯಾಗಿರುವ 28 ವರ್ಷದ ನಗಿರೆ ಲತೀಫಾ ಮೇ 23ರಂದು ಬೆಂಗಳೂರಿಗೆ ಬಂದಿದ್ದರು. ಬಳಿಕ ದೇಹ ನೋವು ಸೇರಿದಂತೆ ಎಬೋಲಾ ವೈರಸ್‌ಗೆ ಹೋಲುವ ಕೆಲವು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.

ಮಹಿಳೆಯ ರಕ್ತ ಮತ್ತು ಇತರ ವೈದ್ಯಕೀಯ ಮಾದರಿಗಳನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಮೂಲಕ ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬರುವವರೆಗೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಮಹಿಳೆ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಆರೋಗ್ಯ ಪರಿಶೀಲನೆ ನಡೆಸುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಉಗಾಂಡಾ ಮತ್ತು ಕಾಂಗೋ ಸೇರಿದಂತೆ ಎಬೋಲಾ ಅಪಾಯ ಇರುವ ಆಫ್ರಿಕಾ ದೇಶಗಳಿಂದ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಆರೋಗ್ಯ ನಿಗಾದಲ್ಲಿಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಬಂಡಿಬುಗ್ಯೋ ವೈರಸ್‌ ಸಂಬಂಧಿತ ಎಬೋಲಾ ಪರಿಸ್ಥಿತಿಯನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದೆ.

ಆದರೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಈಗಿರುವುದು ಕೇವಲ ಶಂಕಿತ ಪ್ರಕರಣವಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕವೇ ಸೋಂಕು ದೃಢಪಟ್ಟಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಬಂದಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಮಹಿಳೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂಬ ವರದಿಗಳೂ ಹೊರಬಿದ್ದಿವೆ. ಆದಾಗ್ಯೂ ಅಧಿಕೃತ ದೃಢೀಕರಣಕ್ಕಾಗಿ ಆರೋಗ್ಯ ಇಲಾಖೆಯ ಅಂತಿಮ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.