ನಿರ್ಮಾಣ ಹಂತದಲ್ಲಿರುವ ಅಬುಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್

ಅಬುದಾಭಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬುಧವಾರ ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿ ಇದು “ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ” ಎಂದು ಬಣ್ಣಿಸಿದರು ಎಂದು ವರದಿಯಾಗಿದೆ.

ಗಲ್ಫ್ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಯುಎಇಗೆ ಆಗಮಿಸಿದ ಜೈಶಂಕರ್ ಅವರು ಸಾಂಪ್ರದಾಯಿಕ ದೇವಾಲಯವನ್ನು ನಿರ್ಮಿಸುವಲ್ಲಿ ಭಾರತೀಯರ ಪ್ರಯತ್ನವನ್ನು ಶ್ಲಾಘಿಸಿದರು.

“ಗಣೇಶ ಚತುರ್ಥಿಯಂದು, ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದಿಸಲ್ಪಟ್ಟಿದ್ದೇನೆ. ಕ್ಷಿಪ್ರ ಪ್ರಗತಿಯನ್ನು ನೋಡಲು ಸಂತೋಷವಾಗಿದೆ ಮತ್ತು ಒಳಗೊಂಡಿರುವ ಎಲ್ಲರ ಭಕ್ತಿಯನ್ನು ಅತೀವವಾಗಿ ಪ್ರಶಂಸಿಸುತ್ತೇನೆ. ಸ್ಥಳದಲ್ಲಿರುವ ಬಿ.ಎ.ಪಿಎಸ್ ತಂಡ, ಸಮುದಾಯದ ಬೆಂಬಲಿಗರು ಮತ್ತು ಭಕ್ತರು ಮತ್ತು ಕೆಲಸಗಾರರನ್ನು ಭೇಟಿ ಮಾಡಿದೆ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಅಬುದಾಭಿಯ ಸಹಿಷ್ಣುತೆ ಮತ್ತು ಸಹಬಾಳ್ವೆಯ ಸಚಿವ ಶೇಖ್ ನಹ್ಯಾನ್ ಬಿನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದ ಜೈಶಂಕರ್ ಭಾರತೀಯ ಸಮುದಾಯ, ಯೋಗ ಚಟುವಟಿಕೆಗಳು, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ ಅವರ ಬಲವಾದ ಬೆಂಬಲವನ್ನು ಶ್ಲಾಘಿಸಿದರು.

ಸುಮಾರು 55,000 ಚದರ ಮೀಟರ್ ವಿಸ್ತಾರವಾದ ಜಾಗದಲ್ಲಿ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಲ್ಲುಗಳನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳಿಂದ ಕೈಯಿಂದ ಕೆತ್ತಲಾಗುತ್ತದೆ ಮತ್ತು ಯುಎಇಯಲ್ಲಿ ಜೋಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ಕಲ್ಲಿನಿಂದ ನಿರ್ಮಿಸಿದ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಲಿದೆ.

ಚಿತ್ರಕೃಪೆ: ಎಸ್.ಜೈಶಂಕರ್/ಟ್ವಿಟರ್