ಪೊಲೀಸರಿಗೂ ಕರ್ತವ್ಯ ಆ್ಯಪ್ ಕಡ್ಡಾಯ; ಹೊಸ ಹಾಜರಾತಿ ನಿಯಮಕ್ಕೆ ಸಿಬ್ಬಂದಿಗಳ ಅಸಮಾಧಾನ!

ಬೆಂಗಳೂರು: ಆಡಳಿತದಲ್ಲಿ ದಕ್ಷತೆ, ನೌಕರರ ಹಾಜರಾತಿಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ತವ್ಯ ಆ್ಯಪ್ ಅನ್ನು ಪೊಲೀಸ್ ಇಲಾಖೆಯಲ್ಲೂ ಕಡ್ಡಾಯಗೊಳಿಸಿರುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದ ಎಲ್ಲ ಪೊಲೀಸರು ಕರ್ತವ್ಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ, ಪ್ರತಿದಿನ ಲಾಗಿನ್ ಮತ್ತು ಲಾಗ್‌ಔಟ್ ಮಾಡುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಡಿಐಜಿಪಿ ಅ. 5ರಂದು ಸುತ್ತೋಲೆ ಹೊರಡಿಸಿದ್ದಾರೆ. ಆಯಾ ಘಟಕಗಳ ಮೇಲಾಧಿಕಾರಿಗಳು ಈ ನಿರ್ದೇಶನವನ್ನು ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಆದರೆ, ಇತರ ಸರ್ಕಾರಿ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯ ಕಾರ್ಯವೈಖರಿ ಭಿನ್ನವಾಗಿರುವುದರಿಂದ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ನಿರ್ವಹಿಸುವುದು ಕಷ್ಟಕರವಾಗಲಿದೆ ಎಂಬುದು ಪೊಲೀಸರ ಅಭಿಪ್ರಾಯವಾಗಿದೆ.

ಪೊಲೀಸರು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾದ ಸಂದರ್ಭಗಳಿರುತ್ತವೆ. ಅಪರಾಧ ಪ್ರಕರಣಗಳ ತನಿಖೆಗಾಗಿ ಹೊರ ಜಿಲ್ಲೆ ಹಾಗೂ ಇತರ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಸಮಯದ ಮಿತಿಯಿಲ್ಲದೆ ಕೆಲಸ ಮಾಡುವುದರ ಜೊತೆಗೆ, ನಿಗದಿತ ಪಾಳಿಯ ಅವಧಿ ಮುಗಿದರೂ ಕೆಲವೊಮ್ಮೆ ಕರ್ತವ್ಯ ಮುಂದುವರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಲಾಗಿನ್ ಮತ್ತು ಲಾಗ್‌ಔಟ್ ಮೂಲಕ ಹಾಜರಾತಿ ದಾಖಲಿಸುವುದು ಪ್ರಾಯೋಗಿಕವಾಗಿ ಕಷ್ಟವಾಗಬಹುದು ಎಂದು ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತರ ಇಲಾಖೆಗಳ ನೌಕರರಂತೆ ಪೊಲೀಸ್ ಸಿಬ್ಬಂದಿಯ ಕರ್ತವ್ಯದ ಸಮಯವನ್ನು ನಿಗದಿತ ಅವಧಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಪೊಲೀಸ್ ಇಲಾಖೆಗೆ ಕರ್ತವ್ಯ ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸುವ ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯವನ್ನು ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ.