ಉಡುಪಿ: ಶತ ಶತಮಾನಗಳಿಂದ ನಮ್ಮ ಹಿರಿಯರು ಅತ್ಯಂತ ವಿಶಿಷ್ಟವಾದ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಶ್ರಮಿಸಿದ್ದಾರೆ. ಅದರ ಫಲವನ್ನು ನಾವೆಲ್ಲ ಉಣ್ಣುತ್ತಿದ್ದೇವೆ. ಹಾಗಂತ ನಾವು ವಿಶ್ರಮಿಸುವಂತಿಲ್ಲ. ನಮ್ಮಭವಿಷ್ಯದ ಪೀಳಿಗೆಯ ಒಳಿತಿಗಾಗಿ ಎಲ್ಲ ಸವಾಲುಗಳನ್ನು ಎದುರಿಸಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿಯುವ ಕರ್ತವ್ಯ ನಿರ್ವಹಿಸಲೇಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆನೀಡಿದ್ದಾರೆ.
ಉಡುಪಿ ಜಿಲ್ಲಾ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ರಥಬೀದಿಯ ಶ್ರೀ ಭಂಡಾರಕೇರಿ ಮಠದ ಹಿಮಾಲಯ ಸಭಾಭವನದಲ್ಲಿ ಭಾನುವಾರ ಕಾರ್ಯಕರ್ತರ ಅಭ್ಯಾಸವರ್ಗವನ್ನು ಉದ್ಘಾಟಿಸಿ ಶ್ರೀಗಳು ಸಂದೇಶ ನೀಡಿದರು.
ದೇಶ – ಸಂಸ್ಕೃತಿಗಳ ಒಳಿತಿಗಾಗಿ ನಿರ್ವಹಿಸುವಲ್ಲಿ ವ್ಯಾಪಾರಿ ಭಾವನೆ ಸಲ್ಲದು. ಇದು ಲಾಭ ನಷ್ಟದ ಲೆಕ್ಕಾಚಾರ ಇರಬಾರದು. ಕೇವಲ ಕರ್ತವ್ಯದ ದೃಷ್ಟಿ ಮುಖ್ಯ ಎಂದು ಶ್ರೀಗಳು ಕಿವಿ ಮಾತು ಹೇಳಿದರು.
ವಿಹಿಂಪ ರಾಜ್ಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ , ಜಿಲ್ಲಾ ವಿಹಿಂಪ ಅಧ್ಯಕ್ಷ ಪಿ ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು .