ಕರಾವಳಿಯಲ್ಲಿ ವರುಣನ ಅಬ್ಬರ: ಕುಂದಾಪುರ-ಬೈಂದೂರು ತಾಲೂಕು ಶಾಲಾ-ಕಾಲೇಜುಗಳಿಗೆ ರಜೆ

ಕುಂದಾಪುರ: ಕರಾವಳಿಯ ಹಲವೆಡೆಗಳಲ್ಲಿ ಮುಸಲಧಾರೆ ಮಳೆಯಾಗುತ್ತಿದ್ದು, ಕುಂದಾಪುರ-ಬೈಂದೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಕುಂದಾಪುರ ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಶಿರೂರು ಭಾಗವು ಸಂಪೂರ್ಣವಾಗಿ ಜಲಾವೃತವಾಗಿದ್ದು, ಕೆಳಪೇಟೆ, ಕರಾವಳಿ ಭಾಗಗಳು ಮುಳುಗಡೆಯಾಗಿದ್ದು ಮನೆಗಳಿಗೆ ಜಲದಿಗ್ಭಂಧನವಾಗಿದೆ.

ರಸ್ತೆಗಳಲ್ಲಿ ಕೊಚ್ಚೆ ನೀರು ತುಂಬಿ ಹರಿಯುತ್ತಿದೆ. ಹೊಳೆಗಳೆಲ್ಲಾ ತುಂಬಿ ಹರಿಯುತ್ತಿದ್ದು, ನದಿ ದಂಡೆಯ ಮನೆಗಳೆಲ್ಲಾ ಮುಳುಗಡೆಯಾಗಿವೆ. ಈ ರೀತಿಯ ಜಲಪ್ರಳಯದಂತ ಸ್ಥಿತಿ ೧೯೧೩ ರಲ್ಲಿ ಕಂಡು ಬಂದಿತ್ತು, ಆ ಬಳಿಕ ಇದೇ ಮೊದಲ ಬಾರಿಗೆ ಇಂತಹ ಸ್ಥಿತಿ ಕಂದುಬಂದಿದೆ ಎಂದು ಇಲ್ಲಿನ ಹಿರಿಯರು ನೆನಪಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಯುವಕರು ಸೇರಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.