ಜಗದ್ಗುರು ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತ ಜಗತ್ತಿನ ವ್ಯವಸ್ಥೆಗೆ ಪೂರಕ- ಪುತ್ತಿಗೆ ಶ್ರೀ

ಉಡುಪಿ: ಜಗದ್ಗುರು ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತ ವಾಸ್ತವ ಮತ್ತು ಪ್ರಾಯೋಗಿಕವಾಗಿದ್ದು ಜಗತ್ತಿನ ವ್ಯವಸ್ಥೆಗೆ ಪೂರಕವಾಗಿದೆ. ಆಚಾರ್ಯ ಮಧ್ವರ ಸಂದೇಶದ ತಳಹದಿಯಲ್ಲಿ ಜಗತ್ತಿನ ವ್ಯವಹಾರ ನಿಂತಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀಪಾದರ 64ನೇ ಜನ್ಮನಕ್ಷತ್ರ ಸಂಭ್ರಮದ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠದ ಆಶ್ರಯದಲ್ಲಿ ಮಣಿಪಾಲ ಮಾಹೆ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಹೊರತಂದ ಆಚಾರ್ಯ ಮಧ್ವರ ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹುಟ್ಟುಹಬ್ಬ ಸಂತೋಷದ ಆಚರಣೆಗೆ ಸೀಮಿತವಾಗಿರದೇ ಗುರು ಹಿರಿಯರಿಗೆ ಗೌರವ ಸಮರ್ಪಿಸುವ ಪ್ರತ್ಯರ್ಪಣೆಯ ಸುಸಂದರ್ಭ. ಈ ನಿಟ್ಟಿನಲ್ಲಿ ಗೀತೆಯ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನದ ಚಿನ್ನದ ಕವಚ ಸಮರ್ಪಿಸಿದ್ದು, ಆ ಮೂಲಕ ತಮ್ಮ ಜನ್ಮನಕ್ಷತ್ರವನ್ನು ಹರಿ- ಗುರುಗಳ ಸೇವೆಯ ಮೂಲಕ ಆಚರಿಸುತ್ತಿರುವುದಾಗಿ ಶ್ರೀಪಾದರು ತಿಳಿಸಿದರು.

ಅಂಚೆಚೀಟಿ ಬಿಡುಗಡೆಗೊಳಿಸಿದ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಮಧ್ವಾಚಾರ್ಯರ ಅಂಚೆಚೀಟಿ ಹೊರತಂದಿರುವ ಅಂಚೆ ಇಲಾಖೆ ಕಾರ್ಯ ಶ್ಲಾಘನೀಯ. ವಿದೇಶಗಳಲ್ಲಿ ಕೃಷ್ಣತತ್ವ ಪ್ರಸಾರದ ಮೂಲಕ ಖ್ಯಾತರಾದ ಪುತ್ತಿಗೆ ಶ್ರೀಗಳು ಭಗವದ್ಗೀತೆಗೆ ವಿಶ್ವಮಾನ್ಯತೆ ತಂದಿದ್ದಾರೆ. ಭಗವದ್ಗೀತೆ ವಿಶ್ವಗೀತೆಯಾಗಲಿ ಎಂದು ಹಾರೈಸಿದರು.

ಡಿಸಿಎಂ ಡಿಕೆ ಶಿವಕುಮಾರ್, ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಆಫ್ರಿಕನ್ ವಿವಿ ಉಪಕುಲಪತಿ ಡಾ.ಕೆ.ರವಿ ಆಚಾರ್ಯ, ಬೆಂಗಳೂರಿನ ಡಾ.ಮಹಾಂತೇಶ್ ಆರ್.ಚರಂತಿಮಠ, ಶತಾವಧಾನಿ ಡಾ.ಉಡುಪಿ ರಾಮನಾಥ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.