ಮಂಗಳೂರು: ಗ್ರಾಮ ವಾಸ್ತವ್ಯದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು ಗ್ರಾಮದಲ್ಲಿ ಕನಿಷ್ಠ ಒಂದು ಗಂಟೆಗಳ ಕಾಲ ಜನರ ಸಮಸ್ಯೆ ಆಲಿಸಬೇಕು. ಈ ವೇಳೆ ಅಧಿಕಾರಿಗಳು ತಕ್ಷಣ ಜನರ ಸಮಸ್ಯೆ ಪರಿಹರಿಸೋ ಕೆಲಸ ಮಾಡಬೇಕು. ಸಂಪರ್ಕ ಸಭೆಯಾಗಿಯೂ ಈ ಗ್ರಾಮ ವಾಸ್ತವ್ಯ ಪರಿವರ್ತನೆಯಾಗಬೇಕು
ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದಾರೆ.
ಗ್ರಾಮ ವಾಸ್ತವ್ಯದ ಮೂಲಕ ಈ ರೀತಿ ಮಾಹಿತಿ ಸಂಗ್ರಹಿಸುವುದು ಮುಖ್ಯ. ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಂತಹ ಜನಸಂಪರ್ಕವನ್ನು ಆರಂಭಿಸಿದ್ದರು. ನಮ್ಮ ಮನಸ್ಸಲ್ಲಿ ಜನರ ಜೀವನದ ಬಗ್ಗೆ ಎಷ್ಟೇ ತಿಳಿಯುವ ಆಸಕ್ತಿ ಇದ್ದರೂ ಅದು ಸಾಧ್ಯವಾಗಲ್ಲ.
ಅಧಿಕಾರಿಗಳು ಕೂಡ ಸಮಸ್ಯೆಗೆ ಪರಿಹಾರ ಕೊಡ್ತಾರೆ ಹೊರತು, ಅದರ ಸಮಸ್ಯೆ ಬಗ್ಗೆ ಅರಿವು ಮೂಡಿಸಲ್ಲ. ಹೀಗಾಗಿ ಸರ್ಕಾರ ಸಮಸ್ಯೆಗಳ ಅರಿವನ್ನು ತಿಳಿದುಕೊಳ್ಳಬೇಕು. ಆತ್ಮಹತ್ಯೆಯಂತಹ ಪ್ರಕರಣಗಳು ನಡೆದ ಬಳಿಕ ಪರಿಹಾರ ನೀಡುವ ಬದಲು ಮೊದಲೇ ಸಮಸ್ಯೆ ತಿಳಿದುಕೊಳ್ಳಬೇಕು ಎಂದರು.
ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ಸಿಎಂ ಕುಮಾರಸ್ವಾಮಿಯನ್ನು ಸುತ್ತುವರಿಯಬಾರದು. ಜನರೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಡಬೇಕು. ಅರ್ಧ ಅಥವಾ ಒಂದು ಗಂಟೆ ಜನರೊಂದಿಗೆ ಸಂಭಾಷಣೆ, ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದರು.












