ಬೆಂಗಳೂರು: ಡ್ರಗ್ಸ್ ನಂಟಿನ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಾಗಿಣಿ ದ್ವಿವೇದಿ ವೈದ್ಯಕೀಯ ಪರೀಕ್ಷೆ ವೇಳೆ ರಂಪಾಟ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ರಕ್ತ, ಮೂತ್ರ ಹಾಗೂ ತಲೆಕೂದಲು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದ ಸಿಸಿಬಿ ಪೊಲೀಸರು, ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆಗೆ ಸಂಜನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ರಾಗಿಣಿ ಸಹ ಪರೀಕ್ಷೆಗೆ ತಗಾದೆ ತೆಗೆದಿದ್ದರು. ಆಸ್ಪತ್ರೆ ಬೆಡ್ ಮೇಲೆಯೇ ಕುಳಿತು ತಮ್ಮ ಪರ ವಕೀಲರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಮೂತ್ರದ ಬದಲು ನೀರು ತಂದುಕೊಟ್ಟ ರಾಗಿಣಿ:
ಪರೀಕ್ಷೆಗಾಗಿ ಮೂತ್ರವನ್ನು ತಂದು ಕೊಡುವಂತೆ ರಾಗಿಣಿಗೆ ವೈದ್ಯರು ತಿಳಿಸಿದ್ದರು.ಆದರೆ ಆಕೆ ಶೌಚಾಲಯಕ್ಕೆ ಹೋಗಿ ಮೂತ್ರದ ಬದಲು ನೀರನ್ನು ಚಿಕ್ಕ ಡಬ್ಬಿಯಲ್ಲಿ ತುಂಬಿ ಕೊಟ್ಟಿದ್ದರು. ಇದನ್ನು ವೈದ್ಯರು ಪೊಲೀಸರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಶ್ನಿಸಿದಾಗ ರಾಗಿಣಿ ತಪ್ಪೊಪ್ಪಿಕೊಂಡಿದ್ದು, ಬಳಿಕ ನರ್ಸ್ ಸಮ್ಮುಖದಲ್ಲೇ ರಾಗಿಣಿ ಅವರಿಂದ ಮೂತ್ರ ಸಂಗ್ರಹಿಸಲಾಗಿದೆ. ಈ ವಿಷಯವನ್ನು ಪೊಲೀಸರು ನ್ಯಾಯಾಲಯದ ಗಮನಕ್ಕೂ ತರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
‘ನನ್ನ ಜೀವನ ಈಗಾಗಲೇ ಹಾಳಾಗಿದೆ. ಈಗ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಾರೆ. ಜೈಲಿಗೆ ಹೋಗಬೇಕಾಗುತ್ತದೆ. ಯಾವುದೇ ಪರೀಕ್ಷೆ ಮಾಡುವುದಿದ್ದರೂ ನಮ್ಮ ವಕೀಲರ ಗಮನಕ್ಕೆ ತಂದು ಮಾಡಿ ಎಂದು ರಾಗಿಣಿ ಪಟ್ಟು ಹಿಡಿದಿದ್ದರು. ವಿಡಿಯೋದಲ್ಲಿ ಈ ಸಂಭಾಷಣೆ ಕೂಡ ಸೆರೆಯಾಗಿದೆ.