ಬ್ರಹ್ಮಾವರ: ಇಲ್ಲಿನ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಶಾಮುಕ್ತಿ ಅಭಿಯಾನ, ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧ ತಡೆ ಹಾಗೂ ರಸ್ತೆ ಸುರಕ್ಷತೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಆರಕ್ಷಕ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಮುಕ್ತಾಬಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಮಾದಕ ಪದಾರ್ಥಗಳ ಬಳಕೆಯಿಂದ ಉಂಟಾಗುವ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳು, ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳುವ ಕ್ರಮಗಳು ಮತ್ತು ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಪ್ರಬೆಶಿನರಿ ಪಿಎಸ್ಐ ಕುಮಾರಿ ಆಶ್ರಿತ ಎ. ಶೆಟ್ಟಿ ಅವರು ಸಹ ವಿದ್ಯಾರ್ಥಿಗಳಿಗೆ ಕಿರು ಚಿತ್ರದೊಂದಿಗೆಜಾಗೃತಿ ಮೂಡಿಸುವ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಲಯನ್ ಐವನ್ ಡೊನಾತ್ ಸುವಾರಿಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು. ಮಾಧ್ಯಮದ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದ್ದು, ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂತೋಷ್ ನೀಲಾವರ್ ಅವರು ನಿರ್ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಬ್ರಹ್ಮಾವರ ಆರಕ್ಷಕ ಠಾಣೆಯ ಸಿಬ್ಬಂದಿಗಳಾದ ಶ್ರೀಮತಿ ಜಯಶ್ರೀ ಸಿದ್ದಪ್ಪ ಮತ್ತು ಶ್ರೀ ಕಿರಣ್ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಕಾನೂನು ಅರಿವು ಹಾಗೂ ಸುರಕ್ಷತಾ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಜಾಗೃತಿ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸಿತು.

















