ವಿದ್ಯಾರ್ಥಿಗಳಿಗಾಗಿ ನಶಾ ಮುಕ್ತ ಭಾರತ ಅಭಿಯಾನ ಮತ್ತು ಕಾನೂನು ಜಾಗೃತಿ ಕಾರ್ಯಾಗಾರ

ಉಡುಪಿ: ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಜಿಲ್ಲಾ ಲೀಡ್ ಕಾಲೇಜು, ಉಡುಪಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಪೋಲೀಸ್ ಇಲಾಖೆ, ಜಿಲ್ಲಾ ಅಂಗವಿಕಲ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಉಡುಪಿ ಇವರ ಜಂಟಿ ಸಹಯೋಗದಿಂದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕಾನೂನು ಜಾಗೃತಿ ಕಾರ್ಯಗಾರ ಕಾಲೇಜಿನ ಯು.ಜಿ. ಸಭಾಂಗಣದಲ್ಲಿ ಬುಧವಾರದಂದು ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ, “ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ” ಎಂಬ ಬಸವಣ್ಣನವರ ವಚನದ ಸಾಲನ್ನು ಪ್ರಸ್ತಾಪಿಸಿದರು. ಕ್ರಿ.ಶ. 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಧರ್ಮ ಭೇದಗಳ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಒಬ್ಬ ಶ್ರೇಷ್ಠ ಮಾನವತಾವಾದಿಯಾಗಿದ್ದರು ಎಂದರು.

‘ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ’ ಎನ್ನುತ್ತಾ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗದೆ, ಕೆಟ್ಟ ವ್ಯಸನಗಳ ದಾಸರಾಗದೆ, ಉತ್ತಮ ವ್ಯಸನಗಳಾದ ಪುಸ್ತಕ ಓದುವುದು, ಉತ್ತಮ ಚಿಂತನೆ, ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಒಂದೇ ವಯಸ್ಸಿನ ಯುವಕರು ಮತ್ತು ಗೆಳೆಯರ ಒತ್ತಡದಿಂದ ಯುವಕರೆಲ್ಲ ಮಾದಕ ವ್ಯಸನದ ದಾಸರಾಗುತ್ತಿದ್ದು ಇದರಿಂದ ತಮ್ಮನ್ನು ತಾವೇ ಹೊರತರಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಮಾತನಾಡಿ, ನಶಾ ಮುಕ್ತ ಭಾರತದ ಪರಿಕಲ್ಪನೆ ಕೇವಲ ಅಭಿಯಾನ ಮತ್ತು ಕಾರ್ಯಗಾರಗಳಿಂದ ಸಾಧ್ಯವಿಲ್ಲ. ಕಾನೂನಿನ ಅರಿವು, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಿ ಅಧ್ಯಯನದ ವಿಷಯವಾಗಬೇಕು. ಧ್ಯಾನ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳಿಂದ ಮಾದಕ ವ್ಯಸನಿಗಳ ಮಾನಸಿಕ ಬದಲಾವಣೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಭಾಸ್ಕರ ಶೆಟ್ಟಿ ಮಾತನಾಡಿ, ಆರೋಗ್ಯವಂತ ಭಾರತಕ್ಕೆ ಆರೋಗ್ಯವಂತ ಯುವಜನತೆಯ ಕೊಡುಗೆ ಮುಖ್ಯವಾದುದು. ಯುವಜನತೆ ಮುಕ್ತ ಮನಸ್ಸನ್ನು ಹೊಂದಿಕೊಂಡು ಆರೋಗ್ಯವಂತ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯವಸ್ಥಿತ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಹೇಳಿದರು.

ಕು. ನಿಧಿ ಪೋಲೀಸ್ ಸಬ್ ಇನ್ಸ್ಪೆಕ್ಟರ್, ಮಣಿಪಾಲ ಇವರು ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಜಿಲ್ಲಾ ಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಜಾಗೃತಿ ಕಾರ್ಯಗಾರವನ್ನು ನಡೆಸಿಕೊಟ್ಟರು.

ಜಿಲ್ಲೆಯ ವಿವಿಧ ಕಾಲೇಜುಗಳ ಎನ್.ಎಸ್.ಎಸ್. ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ಮಾದಕ ದ್ರವ್ಯ ವ್ಯಸನ ತಡೆ ಸಮಿತಿ ಸಂಚಾಲಕಿ ಶ್ರೀಮತಿ ಶುಭಾ ಬಿ.ಎಸ್. , ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕರಾದ ಡಾ. ರಾಜೇಂದ್ರ ಕೆ. ಮತ್ತು ಕು. ರಮ್ಯ ವಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್ ಸ್ವಾಗತಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಕು. ಗೌರಿ ನಿರೂಪಿಸಿದರು, ಕು. ರಿತಿಕಾ ವಂದಿಸಿದರು.