ಭಾಷಾ, ಸಂಸ್ಕೃತಿ, ಕಲಾ ಸಂಭ್ರಮದ ಕಾರ್ಕಳ ಉತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ

ಕಾರ್ಕಳ, ಮಾ.14,2022: ಕನ್ನಡ ನಾಡಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವನೆ ತುಂಬಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಕಳ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಸಂಸ್ಕೃತಿಯು ಪ್ರಪಂಚದ ಅತ್ಯಂತ ಪ್ರಾಚೀನ ಭಾರತೀಯ ಸಂಸ್ಕೃತಿಗಿಂತ ಭಿನ್ನವಾಗಿಲ್ಲ. ಕರ್ನಾಟಕದ ಪರಂಪರೆಯನ್ನು ಅದರ ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಕರಕುಶಲಗಳಿಂದ ತಿಳಿಯಬಹುದು ಮತ್ತು ಗುರುತಿಸಬಹುದು. ಕನ್ನಡನಾಡಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಾಮರಸ್ಯದ ದೃಷ್ಟಿ ಇದೆ ಎಂದರು.

ಸ್ವಾಮಿ ವಿವೇಕಾನಂದರ ಪ್ರಕಾರ, ಧರ್ಮವು ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತದೆ ಮತ್ತು ಸಹೋದರತ್ವದ ಮನೋಭಾವದಿಂದ ಸಮಾಜವನ್ನು ಸಮಗ್ರ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ. ಸಾಮಾಜಿಕ ಏಕತೆಯನ್ನು ಹೆಚ್ಚಿಸುವುದು ಪ್ರಪಂಚದ ಎಲ್ಲಾ ಧರ್ಮಗಳನ್ನು ಸ್ಥಾಪಿಸುವ ಮೂಲ ಉದ್ದೇಶವಾಗಿದೆ. ಹಿಂದೂ ಧರ್ಮವು “ಸರ್ವ ಧರ್ಮ ಸಂಭವ” ಮತ್ತು “ವಸುಧೈವ ಕುಟುಂಬಕಂ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ. ನಮ್ಮ ಭಾರತೀಯ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿರುವ ಕಾರ್ಕಳ ನಗರವು ಶಿಲ್ಪಕಲೆಯಲ್ಲಿ ತನ್ನ ಪ್ರಾವೀಣ್ಯತೆಗಾಗಿ ವಿಶ್ವಪ್ರಸಿದ್ಧವಾಗಿದೆ. ಇಲ್ಲಿನ ಶಿಲ್ಪಿಗಳಿಗೆ ಕಲ್ಲುಗಳಿಗೆ ಜೀವ ತುಂಬುವ ಸಾಮರ್ಥ್ಯವಿದೆ. ಅವರ ಕಲೆಯ ನೇರ ಸಾಕ್ಷ್ಯವನ್ನು ಇಲ್ಲಿ ಕಾಣಬಹುದಾಗಿದೆ ಎಂದ ಅವರು, ಕಾರ್ಕಳ ನಗರದ ಪ್ರಮುಖ ಆಕರ್ಷಣೆಯೆಂದರೆ ನಮಗೆ ಸತ್ಯ, ಅಹಿಂಸೆ ಮತ್ತು ಪರಿತ್ಯಾಗದ ಸಂದೇಶವನ್ನು ನೀಡುವ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆ. ಸರ್ವಧರ್ಮ ಸಮನ್ವಯದ ಈ ನೆಲದಲ್ಲಿ ಹುಟ್ಟಿದ ಅನೇಕ ಮಹನೀಯರು ರಾಷ್ಟ್ರಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಈ ಊರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಕರಾವಳಿ ಕರ್ನಾಟಕದ ಎಲ್ಲಾ ಧರ್ಮಗಳ ಮತ್ತು ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವಾದ ಕಾರ್ಕಳದಲ್ಲಿ 10 ದಿನಗಳ ಭಾಷಾ ಸಂಸ್ಕೃತಿ ಮತ್ತು ಕಲಾ ಉತ್ಸವದ ವೈಭವದಲ್ಲಿ ಭಾಗವಹಿಸಿರುದು ಸಂತೋಷವಾಗಿದೆ. ಈ ಪವಿತ್ರ ಕ್ಷೇತ್ರದ ಜನತೆ ಧರ್ಮ, ಸಂಸ್ಕೃತಿಯ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುವವರು, ಸಚಿವರಾದ ಶ್ರೀ ವಿ ಸುನೀಲ್ ಕುಮಾರ್ ಅವರು ಇತಿಹಾಸವನ್ನು ಜೀವಂತವಾಗಿಡುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮಂಜುಳಾ, ಜಿಲ್ಲಾಧಿಕಾರಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.