ಮಜ್ಜಿಗೆನಾ? ಯಾರಿಗೆ ಬೇಕು ಮಾರಾಯ, ಈ ಬೇಸಿಗೆಗೆ ಯಾವುದಾದ್ರೂ ಒಳ್ಳೆ ಸಾಫ್ಟ್ ಡ್ರಿಂಕ್ಸ್ ಕುಡಿದ್ರೆ ಆಹಾ ತಂಪಾಗುತ್ತೆ, ಮಜ್ಜಿಗೆಯಲ್ಲಿ ಏನಿದೆ ಎಂದು ಬಹುತೇಕ ಮಂದಿ ಮಜ್ಜಿಗೆಯನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಆದರೆ ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುದರಿಂದ ಆಗುವ ಆರೋಗ್ಯಲಾಭ ಕೇಳಿದ್ರೆ, ಇಷ್ಟೊಂದೆಲ್ಲಾ ಆಗುತ್ತಾ ಮಜ್ಜಿಗೆ ಕುಡಿದರೆ ಎಂದು ನೀವು ಹುಬ್ಬೇರಿಸಿಬಿಡಬಹುದು. ಹೌದು
ಊಟದ ನಂತರ ಮಜ್ಜಿಗೆ ಕುಡಿಯುವುದು, ಅಥವಾ ಅನ್ನಕ್ಕೆ ಮಜ್ಜಿಗೆ ಕಲಸಿ ತಿನ್ನುವುದು ಬಹುತೇಕ ಮಂದಿ ರೂಢಿಯಲ್ಲಿಟ್ಟುಕೊಂಡಿರುವ ಅಭ್ಯಾಸ. ಈ ಅಭ್ಯಾಸ ಉತ್ತಮ ಆರೋಗ್ಯಕ್ಕೆ ಪರಿಣಾಮಕಾರಿಯಂತೆ,
ಮಜ್ಜಿಗೆಯಲ್ಲಿ ಏನಿದೆ?
ಸಹಜವಾಗಿ ಕಾಣುವ ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಹೇರಳವಾಗಿದೆ. ಬೇಸಿಗೆಯ ದಿನಗಳಲ್ಲಂತೂ ಆರೋಗ್ಯಕ್ಕೆ ಈ ಮಜ್ಜಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಆದಷ್ಟು ಮಜ್ಜಿಗೆ ಕುಡಿದರೆ ಒಳ್ಳೇದು.
ಮಜ್ಜಿಗೆಯಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿವೆ. ಅಲ್ಲದೆ, ಮಜ್ಜಿಗೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ನೀರು ಇರುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುತ್ತದೆ. ಇದು ಪೋಷಕಾಂಶವನ್ನು ವೃದ್ದಿಸಲು ಸಹಕಾರಿ ಎಂದು ಹೇಳಲಾಗಿದೆ.
ಮಜ್ಜಿಗೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದ, ಇದು ದೇಹದಲ್ಲಿನ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹಕ್ಕೆ ಒಳ್ಳೆಯದು. ಅಲ್ಲದೇ ಇದು ತೂಕ ಇಳಿಕೆಗೂ ಉಪಯುಕ್ತವಾಗಿದೆ. ಹಾಗಾಗಿ ತೂಕ ಇಳಿಸುವವರು ಮಜ್ಜಿಗೆ ಟ್ರೈ ಮಾಡಬಹುದು,
ಆದರೆ ಮಜ್ಜಿಗೆ ಜೊತೆ, ಉತ್ತಮ ಆಹಾರ ಸೇವಿಸುವುದು ಸಹ ಅತ್ಯಗತ್ಯ. ನಿಮ್ಮ ದೈನಂದಿನ ಆಹಾರವನ್ನು ಸಮತೋಲನಗೊಳಿಸಬೇಕು. ಇದಲ್ಲದೇ, ಪ್ರತಿದಿನ 400 ಮಿಲಿ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ .ಊಟದ ನಂತರ ಮಜ್ಜಿಗೆ ಕುಡಿಯುವುದು ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದರೆ ಫ್ರೀಜ್ಡ್ ನಲ್ಲಿಟ್ಟಿರುವ ಮಜ್ಜಿಗೆಯನ್ನು ಜಾಸ್ತಿ ಬಳಸದೇ ಸಾದಾ ಮಜ್ಜಿಗೆಯನ್ನು ಕುಡಿಯುದರಿಂದ ದೇಹಕ್ಕೆ ಪೂರಕ ಅಂಶಗಳು ದೊರೆಯುತ್ತದೆ. ಆರೋಗ್ಯ ಕೂಡ ಬೇಸಿಗೆಯಲ್ಲಿ ಸಮಸ್ಥಿತಿಯಲ್ಲಿರುತ್ತದೆ. ನೋಡಿದ್ರಲ್ಲಾ ಈ ಮಜ್ಜಿಗೆಯ ಪ್ರಯೋಜನ. ಬೇಸಿಗೆಯಲ್ಲಿ ಮಜ್ಜಿಗೆ ಕುಡೀರಿ, ಆರೋಗ್ಯ ವೃದ್ದಿಸಿಕೊಳ್ಳಿ.












