ಉಡುಪಿ: ಶಾಲಾ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಕೊಠಡಿಗಳನ್ನು ನಿರ್ಮಿಸುವಂತೆ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ವಿಶಾಲ್ ಆರ್, ಕೆ.ಪಿ.ಎಸ್ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಕೆ.ಪಿ.ಎಸ್ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಶಿಕ್ಷಣ ಇಲಾಖೆಯ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಪ್ರಗತಿ ವಿವರಗಳನ್ನು ಪರಿಶೀಲಿಸಿದ ಅವರು, ಬೇರೆ ಬೇರೆ ಅನುದಾನಗಳನ್ನು ಒಗ್ಗೂಡಿಸಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ತಿಳಿಸಿದರು.
ವಿವೇಕಾ ಶಾಲಾ ಕಾಮಗಾರಿಯಲ್ಲಿ 150 ಕಾಮಗಾರಿಗಳಿಗೆ ಪಿ.ಡಬ್ಲ್ಯೂ.ಡಿ ಹಾಗೂ 38 ಕಾಮಗಾರಿಗಳಿಗೆ ಕೆ.ಆರ್.ಐ.ಡಿ.ಎಲ್ ಇವರು ಅನುಷ್ಠಾನಾಧಿಕಾರಿಗಳಾಗಿದ್ದು ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು. ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಟೆಂಡರ್ ಕರೆದು ಅತ್ಯಂತ ತುರ್ತಾಗಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.
ಕಂದಾಯ ಭೂಮಿ, ಅರಣ್ಯ, ಕುಮ್ಕಿ, ದೇವಸ್ಥಾನ ಜಾಗಗಳ ಸಮಸ್ಸೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ತಿಳಿಸಿದ ಆಯುಕ್ತರು ಅರಣ್ಯ ನೋಂದಣಿ ಕಾಯಿದೆಯ ಪ್ರಕಾರ ಶಾಲಾ ಜಮೀನನ್ನು ಸಾರ್ವಜನಿಕ ಆಸ್ತಿಯೆಂದು ಘೋಷಿಸಿ ಬಳಕೆಯ ಹಕ್ಕನ್ನು ಅರಣ್ಯ ಇಲಾಖೆಯಿಂದ ಪಡೆಯುವಂತೆ ತಿಳಿಸಿದರು.
ಕುಡಿಯುವ ನೀರು ಮತ್ತು ಶೌಚಾಲಯ ನರೇಗಾ ಕಾಮಗಾರಿಯ ಉಳಿಕೆ ಅನುದಾನವನ್ನು ಇತರೆ ಕಾಮಗಾರಿಗಳಿಗೆ ಬಳಸುವಂತೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ಕೊರತೆಯಾಗದಂತೆ ಅವಧಿಗೆ ಮುಂಚಿತವಾಗಿ ವಿತರಿಸಲಾಗುವುದು ಎಂದ ಅವರು, ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಮಾಡಲಾಗುವುದು ಎಂದರು.
ಮಕ್ಕಳ ವೈದ್ಯಕೀಯ ತಪಾಸಣಾ ತಂಡಕ್ಕೆ ತಜ್ಞ ವೈದ್ಯರಿಂದ ತರಬೇತಿ ನೀಡುವಂತೆ, ವಿಟಮಿನ್ ಕೊರತೆ ಇರುವ ಮಕ್ಕಳಿಗೆ ವಿಟಮಿನ್ ಮಾತ್ರೆ ನೀಡಲು, ಮಕ್ಕಳಿಗೆ ದಂತ ತಪಾಸಣಾ ಶಿಬಿರಗಳನ್ನು ಏರ್ಪಡಿಸುವಂತೆ, ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆಯ ನಡೆಸಿ, ಸ್ಕ್ರೀನಿಂಗ್ ಮಾಡಿ, ಯಾವುದಾದರೂ ಗುರುತರವಾದ ಖಾಯಿಲೆಗಳು ಕಂಡುಬಂದಲ್ಲಿ ಅಂತಹ ಮಕ್ಕಳನ್ನು ತಜ್ಞ ವೈದ್ಯರಿಂದ ತಪಾಸಣೆಗೆ ಒಳಪಡಿಸಿ ಆಶಾ ಕಾರ್ಯಕರ್ತೆಯರಿಂದ ಫಾಲೊ ಅಪ್ ಮಾಡಿಸುವಂತೆ ತಿಳಿಸಿದರು.
ಗರ್ಭಿಣಿಯರಿಗೆ ಕಬ್ಬಿಣ ಅಂಶದ ಕೊರತೆಗೆ ಚುಚ್ಚುಮದ್ದು ನೀಡುವಂತೆ ತಿಳಿಸಿದ ಅವರು, ಮಕ್ಕಳ ಮಾನಸಿಕ ಬೆಳವಣಿಗೆಗೆ ತಾಯಿಯು ಗರ್ಭಿಣಿಯಾಗಿದ್ದಾಗ ಎಲ್ಲಾ ಪೋಷಕಾಂಶಗಳ ಕೊರತೆಯೇ ಕಾರಣ ಆದ್ದರಿಂದ ಗರ್ಭಿಣಿಯರಿಗೆ ವಿಟಮಿನ್ ಮಾತ್ರೆ, ಕಬ್ಬಿಣ ಅಂಶದ ಕೊರತೆ ನೀಗಿಸಲು ಚುಚ್ಚುಮದ್ದು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ., ಎಲ್ಲಾ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.