ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವುದರಿಂದ ಒತ್ತಡ ನಿವಾರಣೆ ಸಾಧ್ಯ – ಡಾ|ವಿರೂಪಾಕ್ಷ ದೇವರುಮನೆ

ಕೋಟ: ನಮ್ಮವರೊಂದಿಗೆ ಹೆಚ್ಚು ಹೆಚ್ಚು ಮಾತನಾಡುವುದರಿಂದ ಮತ್ತು ಪ್ರತಿಯೊಬ್ಬರ ಬಗ್ಗೆ ಸಕಾರತ್ಮಕ ಭಾವನೆ ಬೆಳೆಸಿಕೊಂಡು ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಂಡಾಗ ಮಾನಸಿಕ ಒತ್ತಡ ನಿವಾರಣೆ ಸಾಧ್ಯ ಎಂದು ಎ ವಿ ಬಾಳಿಗ ಆಸ್ಪತ್ರೆ ಇದರ ಮನೋರೋಗ ತಜ್ಞ ಡಾ|ವಿರೂಪಾಕ್ಷ ದೇವರು ಮನೆ ಅಭಿಪ್ರಾಯ ಪಟ್ಟರು.

ಅವರು ಭಾನುವಾರ ಸಂತ ಅಂತೋನಿ ದೇವಾಲಯ ಸಾಸ್ತಾನ ಇದರ ಸ್ವಾಸ್ಥ್ಯ ಆಯೋಗ, ಕೆಥೊಲಿಕ್ ಸಭಾ ಮತ್ತು ಕೆಥೊಲಿಕ್ ಸ್ತ್ರೀ ಸಂಘಟನೆ ಜಂಟಿಯಾಗಿ ಆಯೋಜಿಸಿದ ಆಧುನಿಕ ಜೀವನ ಪದ್ದತಿ ಮತ್ತು ಒತ್ತಡ ನಿವಾರಣೆ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಾವು ನಮ್ಮ ಜೀವನದಲ್ಲಿ ಒತ್ತಡದಿಂದ ಇದ್ದೇವೆ ಎಂದು ಒಪ್ಪಿಕೊಂಡಾಗ ಮಾತ್ರ ಅದಕ್ಕೆ ಪರಿಹಾರ ಸಾಧ್ಯ. ಆಧುನಿಕ ಜೀವನದಲ್ಲಿ ಬದುಕುತ್ತಿರುವಾಗ ನಮಗೆ ತೃಪ್ತಿ ಇರುವುದಿಲ್ಲ ಇದರಿಂದಾಗ ಮನಸ್ಸಿನ ಮೇಲೆ ಒತ್ತಡ ಉಂಟಾಗಲು ಕಾರಣವಾಗುತ್ತದೆ. ಬೇರೆಯವರ ಬಗ್ಗೆ ನಕಾರಾತ್ಮಕ ಚಿಂತನೆ ಬಿಟ್ಟು ಎರಡು ಒಳ್ಳೆಯ ಮಾತುಗಳನ್ನಾಡಿದಾಗ ನಮ್ಮ ಮನಸ್ಸಿಗೆ ಸಿಗುವ ಸಮಾಧಾನ ಒತ್ತಡ ಕಡಿಮೆ ಮಾಡಲು ಸಾಧ್ಯವಿದೆ. ಮೊದಲು ಕೂಡು ಕುಟುಂಬಗಳಲ್ಲಿ ಕಾಣಸಿಗುತ್ತಿದ್ದ ಮಾತು ಇಂದು ಮರೆಯಾಗಿದೆ ಬದಲಾಗಿ ಮೌನ ಪ್ರತಿಯೊಂದು ಮನೆಗಳಲ್ಲಿ ಆವರಿಸಿಕೊಂಡಿದೆ. ಪರಸ್ಪರ ಹೆಚ್ಚು ಹೆಚ್ಚು ಮಾತನಾಡಿದಾಗ ನಮ್ಮಲ್ಲಿನ ಒತ್ತಡ ನಿವಾರಣೆ ಸಾಧ್ಯ ಎಂದರು.

ಸಂತ ಅಂತೋನಿ ದೇವಾಲಯ ಸಾಸ್ತಾನ ಇದರ ಪ್ರಧಾನ ಧರ್ಮಗುರುಗಳಾದ ವಂ|ಜೋನ್ ವಾಲ್ಟರ್ ಮೆಂಡೊನ್ಸಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸ್ವಾಸ್ಥ್ಯ ಆಯೋಗದ ಸಂಚಾಲಕ ಜೀವನ್ ಲೂವಿಸ್, ಸ್ಥಳೀಯ ಸಾಸ್ತಾನ ಘಟಕದ ಸ್ವಾಸ್ಥ್ಯ ಆಯೋಗದ ಸಂಚಾಲಿಕಿ ಐರೀನ್ ಲೂವಿಸ್, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಸೊಫಿಯಾ ಡಿ’ಆಲ್ಮೇಡಾ, ಕೆಥೊಲಿಕ್ ಸಭಾ ಅಧ್ಯಕ್ಷರಾದ ಲೂವಿಸ್ ಡಿಸೋಜಾ, ಪಾಲನಾ ಸಮಿತಿಯ ಜಾನೆಟ್ ಬಾಂಜ್ ಉಪಸ್ಥಿತರಿದ್ದರು.