ಉಡುಪಿ: ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನದ ಉಳಿವಿಗೆ ಕಲಾವಿದರು, ಆ ರಂಗದಲ್ಲಿ ಸಾಧನೆ ಮಾಡಿದ ವಿದ್ವಾಂಸರು ಹಾಗೂ ಕಲಾ ಸಂಸ್ಥೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅತ್ಯಗತ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಕರ್ನಾಟಕ ಜಾನಪದ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಯಕ್ಷಗಾನ ಕಲಾಕ್ಷೇತ್ರ ಉಡುಪಿ ಗುಂಡಿಬೈಲು ಇದರ ವತಿಯಿಂದ ಗುಂಡಿಬೈಲಿನ ತಲ್ಲೂರು ಗಾರ್ಡನ್ ರಂಗ ಮಂಟಪದಲ್ಲಿ ಭಾನುವಾರ ನಡೆದ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನದಲ್ಲಿ ಅದ್ಭುತ ಶಕ್ತಿಯಿದೆ. ಈ ಕಲೆಗೆ ತಮ್ಮನ್ನೇ ಮುಡಿಪಾಗಿಟ್ಟ ಕಲಾವಿದರು ನೂರು ವರ್ಷ ಬಾಳಿದ ನಿದರ್ಶನವಿದೆ. ಇಂತಹ ಶ್ರೀಮಂತ ಕಲೆಯನ್ನು ಮಕ್ಕಳಿಗೆ, ಮಹಿಳೆಯರಿಗೆ ದಾಟಿಸಿದರೆ ಕಲೆಯ ಉಳಿವು ಹಾಗೂ ಬೆಳವಣಿಗೆಗೂ ಪೂರಕವಾಗುತ್ತದೆ. ಯಕ್ಷಗಾನ ಅಭ್ಯಾಸ ಮಾಡಿದ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿ ಆಗಿರುವುದನ್ನು ಕಂಡಿದ್ದೇವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಯಕ್ಷಗಾನ ಕಲಿಯುವಂತೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ ಅವರು, ಯಾವುದೇ ಕಲೆಯ ಬೆಳೆವಣಿಗೆಗೆ ಆ ಕ್ಷೇತ್ರದ ಬಗ್ಗೆ ಸಮಗ್ರ ಅಧ್ಯಯನ ಮಾಡಿದ ವಿದ್ವಾಂಸರನ್ನು ಗುರುತಿಸಿ ಗೌರವಿಸುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಜಾನಪದ ಪರಿಷತ್‌ನಿಂದಲೂ ನಾಡಿನ ಜಾನಪದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನದ ಬೆಳವಣಿಗೆಗೆ ವಿದ್ವಾಂಸ ಡಾ.ರಾಘವ ನಂಬಿಯಾರ್ ಅವರ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಯಕ್ಷಗಾನ ಕಲಾಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದರು.
ನನ್ನ 60 ವರ್ಷದ ಪ್ರಾಯದಲ್ಲಿ ಯಕ್ಷಗಾನವನ್ನು ಹಠದಿಂದ ಕಲಿತು, 300ಕ್ಕೂ ಮಿಕ್ಕಿ ಪ್ರದರ್ಶನ ನೀಡಿದೆ. ಯಕ್ಷಗಾನದ ಹುಚ್ಚು ನನಸಾಗಿಸಲು ಬನ್ನಂಜೆ ಸಂಜೀವ ಸುವರ್ಣ ಅವರಂತಹ ಉತ್ತಮ ಗುರುಗಳು ಸಿಕ್ಕಿದರು. ಸುಮಾರು 15 ವರ್ಷ ಅವರ ಒಡನಾಟದಲ್ಲಿ ಯಕ್ಷಗಾನವನ್ನು ಕಲಿತೆ. ಪ್ರಸ್ತುತ ಯಕ್ಷಗಾನಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿರುವ ಈ ಸುಸಂದರ್ಭದಲ್ಲಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ `ಯಕ್ಷಗಾನ ಕಲಾಕ್ಷೇತ್ರ ‘ದಂತಹ ಸಂಘಟನೆಗಳು ಉತ್ತರೋತ್ತರ ಅಭಿವೃದ್ಧಿಯಾಗಬೇಕು. ಕಲಾ ಪ್ರೇಮಿಗಳಿಂದ ಸಂಘಟನೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಯಕ್ಷಗಾನ ವಿದ್ವಾಂಸ, ವಿಮರ್ಶಕ ಡಾ.ರಾಘವ ನಂಬಿಯಾರ್ ಅವರಿಗೆ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕ್ಷೇತ್ರದ ಅಧ್ಯಕ್ಷ ನರಸಿಂಹ ನಾಯಕ್ ವಹಿಸಿದ್ದರು.
ಗಣೇಶ್ ನಾಯಕ್ ಪೆರ್ಣಂಕಿಲ, ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೇಲಿಯೋ, ಕಲಾಕ್ಷೇತ್ರದ ಪದಾಧಿಕಾರಿಗಳಾದ ಬನ್ನಂಜೆ ವಿಶ್ವನಾಥ ಕಾಮತ್, ಡಾ.ರಮೇಶ್ ಚಿಂಬಾಳ್ಕರ್, ನರಸಿಂಹ ಎನ್.ಆರ್., ಗಣೇಶ್ ಕೋಟ್ಯಾನ್, ಗೌರವ ಸಲಹೆಗಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ `ಶೂರ್ಪನಖಾ ವಿವಾಹ-ಖರದೂಷಣ ವಧೆ ‘ ಯಕ್ಷಗಾನ ಪ್ರದರ್ಶನ ನಡೆಯಿತು.