ಉಡುಪಿ: ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗುವ ಜತೆಗೆ, ಮಹಿಳೆಯರನ್ನು ಸಶಕ್ತಗೊಳಿಸಬೇಕು. ಮಹಿಳೆಯರು ಸ್ವಾವಲಂಬಿಗಳಾಗುವುದರ ಜತೆಗೆ ಇತರರಿಗೆ ಸಹಾಯ ಹಸ್ತ ಚಾಚುವ ಕೈಗಳಾಗಬೇಕು ಎಂದು ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಹೇಳಿದರು.
ಉಡುಪಿಯ ಅಜ್ಜರಕಾಡು ಮಹಿಳಾ ಸಮಾಜದಲ್ಲಿ ಭಾನುವಾರ ಸಾ-ಫಲ್ಯ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
ದುಡಿಯುವ ಕೈಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಸೊರಗುತ್ತಿರುವ ಮನಸ್ಸಿಗಳಿಗೆ ಒಳ್ಳೆಯ ವಿಚಾರಗಳನ್ನು ನೀಡಬೇಕು ಎಂದರು.
ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಮಾತನಾಡಿ, ಸಾಮಾಜಿಕ ಕಾರ್ಯ, ಬಡವರಿಗೆ ನೆರವು ಕಲ್ಪಿಸುವ ಉದ್ದೇಶದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ಸಾಹಿ ಮಹಿಳೆಯರು ಸೇರಿ ಟ್ರಸ್ಟ್ ಸ್ಥಾಪಿಸಿದ್ದೇವೆ. ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು ಹಾಗೂ ಅವರ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಕಾರ್ಯಕ್ರಮ, ಗ್ರಾಮೀಣ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳ ಮಾಹಿತಿ, ಪರಿಸರ ಸಂರಕ್ಷಣೆ, ಗ್ರಾಮೀಣ ಮಹಿಳೆಯರ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಟ್ರಸ್ಟ್ ಮುನ್ನಡೆಯಲಿದೆ ಎಂದರು.
ಉಡುಪಿ ಉಜ್ವಲ್ ಡೆವಲಪರ್ಸ್‌ನ ಅಮಿತಾ ಪುರುಷೋತ್ತಮ ಶೆಟ್ಟಿ, ಮಹಿಳಾ ಸಮಾಜದ ಅಧ್ಯಕ್ಷೆ ಜಯಂತಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟು ಪುಸ್ತಕ, ಬಡ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಆಶಾ ನಿಲಯ ವಿಶೇಷ ಮಕ್ಕಳ ಶಾಲೆಗೆ ನೆರವು ನೀಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಇಂದು ರಮಾನಂದ ಭಟ್, ಕೋಶಾಧಿಕಾರಿ ಮಮತಾ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.












