ಡಾ. ಮಾಣಿಕ್ ಸಾಹ ಹೆಗಲಿಗೆ ತ್ರಿಪುರಾ ಕಮಾನು!! ಮುಖ್ಯ ಮಂತ್ರಿ ಹುದ್ದೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ: ಯಾರೀತ ಮಾಣಿಕ್ ಸಾಹ?

ದೆಹಲಿ: ಭಾರತೀಯ ಜನತಾ ಪಕ್ಷವು ಶನಿವಾರ ತನ್ನ ತ್ರಿಪುರಾ ಘಟಕದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಡಾ. ಮಾಣಿಕ್ ಸಾಹ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ. ತ್ರಿಪುರಾ ಮುಖ್ಯಮಂತ್ರಿಯಾಗಿದ್ದ ಬಿಪ್ಲಬ್ ದೇಬ್ ಅವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮಾಣಿಕ್ ಹೆಗಲಿಗೆ ತ್ರಿಪುರಾ ಕಮಾನನ್ನು ಏರಿಸಿರುವುದು ಕುತೂಹಲ ಮೂಡಿಸಿದೆ.

ಬಹಳ ಆಶ್ಚರ್ಯಕರ ರೀತಿಯಲ್ಲಿ ಬಿಪ್ಲಬ್ ದೇಬ್ ಶನಿವಾರ 5 ಗಂಟೆಗೆ ರಾಜೀನಾಮೆ ನೀಡಿದರೆ, ಸಹಾ ಅವರನ್ನು ಎರಡೇ ಗಂಟೆಗಳಲ್ಲಿ, ಸಂಜೆ 7 ರ ಹೊತ್ತಿಗೆ ಮುಖ್ಯಮಂತ್ರಿಯಾಗಿ ಬದಲಿಸಲಾಗಿದೆ. ಪ್ರಸ್ತುತ ಬಿಜೆಪಿಯ ತ್ರಿಪುರಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಮಾಣಿಕ್, ರಾಜ್ಯಸಭಾ ಸಂಸದ ಮತ್ತು ವೃತ್ತಿಯಲ್ಲಿ ದಂತವೈದ್ಯ. 2016 ರಲ್ಲಿ ಬಿಜೆಪಿ ಸೇರುವ ಮೊದಲು ಇವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.

ಡಾ. ಸಾಹ ಪಾಟ್ನಾದ ಸರ್ಕಾರಿ ದಂತವೈದ್ಯಕೀಯ ಕಾಲೇಜಿನಲ್ಲಿ ಪದವಿ ಮತ್ತು ಲಕ್ನೋದ ಕಿಂಗ್ ಜಾರ್ಜಸ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರನ್ನು 2021 ರಲ್ಲಿ ತ್ರಿಪುರದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಮತ್ತು ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಸದಸ್ಯರು ಅವರ ಪರವಾಗಿ ಮತ ಚಲಾಯಿಸಿ ಇವರನ್ನು ರಾಜ್ಯಸಭೆಗೆ ಕಳುಹಿಸಿದ್ದರು.

2020 ರಲ್ಲಿ ಇವರನ್ನು ತ್ರಿಪುರ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಇವರು ತ್ರಿಪುರಾ ಕ್ರಿಕೆಟ್ ಅಸೋಸಿಯೇಷನ್‌ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಡಾ. ಸಾಹ ತ್ರಿಪುರಾ ವೈದ್ಯಕೀಯ ಕಾಲೇಜು ಮತ್ತು ಅಗರ್ತಲಾದ ಡಾ ಬಿಆರ್‌ಎಎಂ ಬೋಧನಾ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ದಂತ ಶಸ್ತ್ರಚಿಕಿತ್ಸೆಯನ್ನು ಸಹ ಕಲಿಸಿದ್ದಾರೆ.