ಡಾ. ಮಾಲತಿ ಕೃಷ್ಣಮೂರ್ತಿಗೆ ಪೊಳಲಿ- ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ

ಉಡುಪಿ: ಇತಿಹಾಸಕಾರರಲ್ಲಿ ಕಳೆದ ನಾಲ್ಕು ದಶಕಗಳಿಂದ ಇತಿಹಾಸವನ್ನು ನೋಡುವ ದೃಷ್ಠಿ ಬದಲಾಗುತ್ತಿದೆ. ಹೊಸ ದೃಷ್ಟಿ, ಆಕಾರ ಬಳಸಿಕೊಂಡು ಹೊಸ ವಿಧಾನಗಳ ಮೂಲಕ ಜನರಿಗೆ ಪ್ರಾದೇಶಿಕ ಇತಿಹಾಸ ಕಟ್ಟಿಕೊಡುವ ಹೊಸ ಪರಂಪರೆ ಆರಂಭವಾಗಿದೆ ಎಂದು ಪುರಾತತ್ವ ತಜ್ಞ ಹಾಗೂ ಸಂಶೋಧಕ ಡಾ. ಪುಂಡಿಕಾಯಿ ಗಣಪತಿ ಭಟ್ ಹೇಳಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಯುಕ್ತ‌ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಮೌಖಿಕ ಪರಂಪರೆ ಮತ್ತು ತುಳುವ ಇತಿಹಾಸ” ವಿಷಯದ ಕುರಿತು ಮಾತನಾಡಿದರು.

ಕಳೆದ ಸುಮಾರು 40 ವರ್ಷಗಳ ಹಿನ್ನೆಲೆಯಲ್ಲಿ ನೋಡಿದರೆ ಹಿಂದೆಲ್ಲ ಇತಿಹಾಸಗಳು ವ್ಯಕ್ತಿ ನಿಷ್ಠ, ರಾಜಕೀಯ ನಿಷ್ಠವಾಗಿತ್ತು. ಮಹಿಳೆಯರಿಗೆ ಅವಕಾಶವೇ ಇಲ್ಲ. ಮಹಿಳೆಯರ ಪಾತ್ರಗಳ ಪ್ರಸ್ತಾಪ ಕೂಡ ಇರಲಿಲ್ಲ. ರಾಜನಿಷ್ಠೆ ಇತಿಹಾಸ ಮುಂದುವರಿದಿತ್ತು. ಆದರೆ ಇತ್ತೀಚೆಗೆ ಆ ಇತಿಹಾಸ ಹೊರತು ಪಡಿಸಿ ಜನ ನಿಷ್ಠ, ಸಮಾಜ ನಿಷ್ಠವಾದ ಇತಿಹಾಸ ರಚನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಇತಿಹಾಸಕಾರರು ಮೌಖಿಕ ಪರಂಪರೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಸಂದರ್ಭ ಇತ್ತೀಚಿನವರೆಗೆ ಇತ್ತು. ತುಳುನಾಡಿನ ಪಾಡ್ದನಗಳು ಇತಿಹಾಸ ರಚನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಜನಜೀವನ ಅರ್ಥ ಮಾಡಲು ಪಾಡ್ದನಗಳಿಂದ ಸಾಧ್ಯ ಎಂದು‌ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಅವರಿಗೆ ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ “ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ” ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ವಹಿಸಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಚೇಳ್ಳಾರುಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಸಹ ಸಂಶೋಧಕ ಡಾ.ಅರುಣ್ ಕುಮಾರ್ ಎಸ್.ಆರ್. ವಂದಿಸಿ ಕಾರ್ಯಕ್ರಮ ನಿರೂಪಿಸಿದರು.