ಜಟಿಲ ಸಿದ್ದಾಂತಗಳಿಗೆ ಸಿಲುಕದೆ ಕಲೆಯನ್ನು ಆಸ್ವಾದಿಸಬೇಕು: ಡಾ.ಎಚ್.ಎಸ್.ಶಿವಪ್ರಕಾಶ್

ಮಣಿಪಾಲ: ಜಟಿಲವಾದ ಸಿದ್ಧಾಂತಗಳ ಒಳಗೆ ಸಿಲುಕದೆ ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಅದನ್ನು ಆಸ್ವಾದಿಸಬೇಕು ಎಂದು ಖ್ಯಾತ ಸಾಹಿತಿ-ಕವಿ-ವಿಮರ್ಶಕ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮಣಿಪಾಲದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್
ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನ ಸಹಯೋಗದಲ್ಲಿ ‘ಅಮೃತ ಯುವ ಕಲೋತ್ಸವ’ದ ಅಂಗವಾಗಿ
ಆಯೋಜಿಸಿದ್ದ ‘ಕಲಾವಿಮರ್ಶೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಲಾವಿಮರ್ಶೆ ಎಂಬುದು ಕಲಾಸಿದ್ಧಾಂತಗಳ ಮೇಲೆಯೇ ಕಟ್ಟಲ್ಪಡುತ್ತಿದ್ದು, ಇದು ಕಲಾವಿಮರ್ಶೆಯ ಮೂಲ ಸಾರವನ್ನೇ ಇಲ್ಲವಾಗಿಸಬಾರದು ಎಂದರು. ವಿಮರ್ಶೆ ಎಂಬುದೇ ಒಂದು ಆಧುನಿಕ ವಿದ್ಯಮಾನವಾಗಿದ್ದು, ಕಲಾವಿಮರ್ಶೆಯು ಭಾರೀ ಸಿದ್ಧಾಂತಗಳ ಭಾರದಲ್ಲಿ ಸೋಲಬಾರದು ಎಂದರು.

ಡಾ.ಪ್ರಭಾಕರ ಜೋಶಿ ಅವರು ಭಾರತೀಯ ಸೌಂದರ್ಯಶಾಸ್ತ್ರದ ಅಂಶಗಳನ್ನು ವಿವರಿಸಿದರು.

ಖ್ಯಾತ ಕಲಾವಿದೆ ಮಧು ನಟರಾಜ್ ಮಾತನಾಡಿ ಕೆಲವು ನೂತನ ಪ್ರಯೋಗಗಳಿಂದ ‘ಕಲೆ’ಯನ್ನು ಯುವ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಡಾ.ಆರ್ತಿ ಶೆಟ್ಟಿ ಭರತನಾಟ್ಯ ಮತ್ತು ಪತ್ರಿಕೋದ್ಯಮವನ್ನು ಒಟ್ಟಿಗೆ ತರಲು ಅವರು ಮಾಡಿದ ಪ್ರಯತ್ನವನ್ನು ವಿವರಿಸಿದರು. ಡಾ.ವಸಂತ ಭಾರಧ್ವಾಜ್ ಮಾತನಾಡಿ ಯಾವುದೇ ಟೀಕೆಗೆ ಮುನ್ನ ಕಲಾಪ್ರಕಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮಾಧ್ಯಮಗಳಲ್ಲಿ ಕಲಾ ವಿಮರ್ಶೆಯ ಸ್ಥಾನ ಮರೆಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಪ್ರೊ ವರದೇಶ್ ಹಿರೇಗಂಗೆ ಕಲೆ ಮತ್ತು ಕಲೆಯ ಅನುಭವವೇ ಕಲಾವಿಮರ್ಶೆಗೆ ಪ್ರಾಥಮಿಕ ಮತ್ತು ಮೂಲಭೂತವಾಗಿದೆ ಎಂದು ವಾದಿಸಿದರು.

ಅಕಾಡೆಮಿಯ ಉಪ ಕಾರ್ಯದರ್ಶಿ ಹೆಲನ್ ಆಚಾರ್ಯ, ವಿದುಷಿ ಭ್ರಮರಿ ಶಿವಪ್ರಕಾಶ್, ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.