ಕಾಂತಾರ ವೀಕ್ಷಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರಿವಾರ

ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಮಂಗಳೂರಿನ ಚಲನಚಿತ್ರ ಮಂದಿರದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ರಿಷಬ್ ಶೆಟ್ಟಿ ಅಭಿಯನದ ಕಾಂತಾರ ಚಿತ್ರ ವೀಕ್ಷಣೆ ಮಾಡಿದರು. ಕಾಂತಾರ ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಗ್ಗಡೆಯವರು ಚಿತ್ರದ ತಮ್ಮ ಅನುಭವವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನೋಡುವುದು ಕಡಿಮೆಯಾಗಿತ್ತು.

ಕರ್ನಾಟಕದ ಒಂದು ಭಾಗದ ವಿಶೇಷ ಅನುಭವಗಳು, ನಂಬಿಕೆ, ನಡವಳಿಕೆಗಳು ಮತ್ತು ದೈವಾರಾಧನೆಯಲ್ಲಿರುವ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ರಿಷಭ್ ಶೆಟ್ಟಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಭಾಗದಲ್ಲಿರುವುದು ಅನ್ಯಾಯದ ವಿರುದ್ದ ಮತ್ತು ಸತ್ಯಕ್ಕಾಗಿ ಹೋರಾಟ ಮಾಡುವ ಕಥೆಗಳು. ಇಂದಿನ ದಿನದಲ್ಲಿ ಎಲ್ಲರಿಗೂ ಬೇಕಾಗಿರುವುದು ನೆಮ್ಮದಿ. ಚಿತ್ರದ ರಾಜನ ಬಳಿ ಎಲ್ಲ ಇದ್ದರೂ ನೆಮ್ಮದಿ ಇರಲಿಲ್ಲ, ಆತ ನೆಮ್ಮದಿ ಅರಸುತ್ತಾ ಹೋಗುತ್ತಾನೆ. ಕಾಂತಾರದಲ್ಲಿ ದೈವಾರಾಧನೆಯನ್ನು ಬಹಳ‌ ಚೆನ್ನಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಹೊಸ ದೃಷ್ಟಿಕೋನವಿದ್ದು, ಯುವಕರಿಗೆ ಇದರಿಂದ ಹಳೆಯ ಸ್ಮರಣೆ ಮತ್ತು ಹೊಸತನದ ಪರಿಚಯವಾಗಲಿದೆ ಎಂದರು.

ಜಾತಿ ಮತ ಬೇಧ ಮರೆತು ಸಹಬಾಳ್ವೆ ಮಾಡಬೇಕೆಂಬ ಸಂದೇಶ ಈ ಚಿತ್ರದಲ್ಲಿದೆ. ಕಾಂತಾರ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಲಾವಿದರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಬೆಳೆಯುತ್ತಿರುವ ತಂತ್ರಜ್ಞಾನ ವನ್ನು ರಿಷಬ್ ಶೆಟ್ಟಿ ಹೇಗೆ ಬಳಸಿದ್ದಾರೆ ಅನ್ನೋದು ಚಿತ್ರದಲ್ಲಿ ನೋಡಿದ್ದೇನೆ. ಕಲಾವಿದರು, ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ತಿಳಿಸಿದರು.