ಇದು ಎಲೆ ಉದುರುವ ಕಾಲ: ತರಗೆಲೆಗಳ ಸುಟ್ಟರೆ ಜೋಕೆ!, ಎಲೆಗಳ ಕುರಿತು ಇಷ್ಟನ್ನುತಿಳಿದುಕೊಳ್ಳಿ: UDUPI XPRESS ಕಾಳಜಿ

ಇನ್ನೇನು ಬೇಸಿಗೆ ಬರುವ ಹೊತ್ತು. ಈಗಾಗಲೇ ಗಿಡ – ಮರಗಳಲ್ಲಿನ ಒಣಗಿದ ಎಲೆಗಳು ಉದುರಲು ಪ್ರಾರಂಭಿಸಿವೆ.

ಉದುರಿದ ಎಲೆಗಳ ಉಳಿಸೋಣ – ಮಣ್ಣಿಗೆ ಬೆರೆಸೋಣ – ಬಳಸೋಣ: ಯಾಕೆ ಗೊತ್ತೇ?

1. ಉದುರಿದ ಒಣ ಎಲೆಗಳು ಮಣ್ಣ ಮೇಲೆ ಬಿದ್ದು ಸ್ವಲ್ಪ ಕಾಲವಾದರೂ ನೇರ ಬಿಸಿಲು ಮಣ್ಣಿಗೆ ಬೀಳದಂತೆ ತಡೆಯುತ್ತವೆ. ಇದರಿಂದ ಮಣ್ಣು ಸವೆಯುವುದು ಸ್ವಲ್ಪವಾದರೂ ತಪ್ಪುತ್ತದೆ. ಹರಡಿದ ಎಲೆಗಳ ಕೆಳಭಾಗದ ಮಣ್ಣು ಸ್ವಲ್ಪ ಕಾಲ ತಂಪಾಗಿರುತ್ತದೆ. ಈ ತಂಪು ಮಣ್ಣಲ್ಲಿ ಬಹುತೇಕ ಮಣ್ನುಜೀವಿಗಳು ಜೀವಿಸುತ್ತವೆ.

2. ಒಣಗಿದ ಎಲೆಗಳು – ಕಡ್ಡಿ – ಹುಲ್ಲು ಇತ್ಯಾದಿಗಳಲ್ಲಿ ಇಂಗಾಲಾಂಶವಿದೆ. ಇವು ಮಣ್ಣಲ್ಲಿ ಬೆರೆತು ಮಣ್ಣಲ್ಲಿ ಸಾವಯವ ಇಂಗಾಲಾಂಶ ಹೆಚ್ಚಿಸುತ್ತದೆ. ಇಂಗಾಲಾಂಶ ಇರುವ ಮಣ್ಣು ಹೆಚ್ಚು ಪ್ರಮಾಣದಲ್ಲಿ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಪಡೆಯುತ್ತದೆ

3. ಒಣಗಿದ ಎಲೆಗಳಲ್ಲಿ ಕ್ಯಾಲ್ಸಿಯಂ – ಸಿಲಿಕಾ – ಬೋರಾನ್ – ಕಬ್ಬಿಣ – ಮ್ಯಾಂಗನೀಸ್ ಅಂಶಗಳಿರುತ್ತವೆ. ಮಣ್ಣಲ್ಲಿ ಬೆರೆತು ಕೊಳೆಯುವ ಎಲೆಗಳಲ್ಲಿನ ಪೋಷಕಾಂಶಗಳು ಕ್ರಮೇಣ ಮಣ್ಣಲ್ಲಿ ಜಮೆಯಾಗುತ್ತವೆ.

ಗಿಡಗಳ ಬೇರುಗಳ ಮೂಲಕ ಮಣ್ಣಲ್ಲಿ ಜಮೆಯಾದ ಪೋಷಕಾಂಶಗಳು ಹಾಗೆಯೇ ಗಿಡಗಳ ವಿವಿಧ ಭಾಗಗಳಿಗೆ ರವಾನೆಯಾಗುತ್ತವೆ. ಪುಷ್ಟಿದಾಯಿಕವಾಗಿ ಬೆಳೆಯುವ ಗಿಡಗಳು ಪೌಶ್ಟಿಕ ಆಹಾರ ಸೃಷ್ಟಿಸುತ್ತವೆ.

4. ಉದುರುವ ಎಲೆಗಳು ಕೆಲವು ಬಗೆಯ ಜೀವಿಗಳಿಗೆ ಆಹಾರದ ಮೂಲ ಹಾಗೂ ಆಶ್ರಯತಾಣವಾಗಿವೆ. ಚಿಟ್ಟಿಗಳು – ದುಂಬಿಗಳು – ಜೇನುನೊಣಗಳು – ಪತಂಗಗಳು ಹಾಗೂ ಇನ್ನಿತರ ಕ್ರಿಮಿ-ಕೀಟಗಳು ತಮ್ಮ ಬದುಕು – ಬಾಳುವೆಗಳಿಗಾಗಿ ಒಣ ಎಲೆಗಳನ್ನೇ ಅವಲಂಬಿಸಿವೆ.

ಹಸಿವು – ಬಾಯಾರಿಕೆಗಳಿಂದ ನರಳುತ್ತಿರುವ ನಮ್ಮ ಮಣ್ಣುಜೀವಿಗಳಿಗೆ ಇವೂ ಒಂದು ರೀತಿಯ ಪಾಕ – ಪಾನಕವಿದ್ದಂತೆ. ಹಾಗಾದ್ರೆ ಇನ್ನು ಉದುರಿದ ಎಲೆಗಳನ್ನು ಕಸ ಎಂದು ಭಾವಿಸದಿರಿ, ಅದನ್ನು ಸುಡಬೇಡಿ, ಸುಡುವುದರಿಂದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಅಧಿಕವಾಗಿ ವಿಪರೀತ ಮಾಲಿನ್ಯವಾಗುತ್ತದೆ. ಹಾಗಾಗಿ ತರಗೆಲೆಗಳನ್ನು ಉಳಿಸೋಣ, ರಕ್ಷಿಸೋಣ