ಮಂಗಳೂರು: ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಮೈಕಲ್ ಡಿ’ಸೊಜಾ ಸಮಾಜಕ್ಕೆ ಪ್ರೇರಣೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.
ಡಾ. ಸಲ್ಡಾನ್ಹಾ ಮಂಗಳೂರು ಧರ್ಮಕ್ಷೇತ್ರ ಕೆನರಾ ಆರ್ಗನೈಸೇಶನ್ ಫಾರ್ ಡೆವಲಪ್‌ಮೆಂಟ್ ಆಂಡ್ ಪೀಸ್ (ಸಿ.ಒ.ಡಿ.ಪಿ.) ಸಂಸ್ಥೆ, ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಬಿಸಿರುವ 77 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.
ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ. ವಂ.ವಲೇರಿಯನ್ ಡಿ’ಸೊಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು. ಮೈಕಲ್ ಅವರಂತಹ ಹೆಚ್ಚು ಜನ ಸಮಾಜದಲ್ಲಿದ್ದಿದ್ದರೆ ಈ ರೀತಿ ಬಡತನವಿರುತ್ತಿರಲಿಲ್ಲ ಎಂದು ಶ್ಲಾಘಿಸಿದರು.
ಪ್ರಸಕ್ತ ವರ್ಷದಲ್ಲಿ ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಮೈಕಲ್ ಡಿ’ ಸೊಜಾ ಒಂದು ಕೋಟಿ ರುಪಾಯಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದಾರೆ, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಂದು ಸಿ.ಒ.ಡಿ.ಪಿ. ನಿರ್ದೇಶಕ ವಂ. ವಿನ್ಸೆಂಟ್ ಡಿಸೊಜಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಕಲ್ ಡಿ’ಸೊಜಾರವರ ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿ’ಸಿಲ್ವ, ಕಾರ್ಯಕ್ರಮದ ಸಂಯೋಜಕ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷ ಜ್ಯೋ ಕುವೆಲ್ಹೊ, ವಂ. ಆಸ್ಟಿನ್ ಪೆರಿಸ್, ವ. ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.












