ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ: ಅಮೇರಿಕಾ-ಭಾರತ ಭಾಂದವ್ಯ ಗಟ್ಟಿ: ನಳಿನ್ 

ಉಡುಪಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭಾರತ ಪ್ರವಾಸದಿಂದ ಅಮೆರಿಕಾ ಹಾಗೂ ಭಾರತದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಭೇಟಿಯ ಮೂಲಕ ಭಾರತಕ್ಕೆ ಅಮೆರಿಕಾದಿಂದ ಎಲ್ಲ ರೀತಿಯ ನೆರವು ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಇಡೀ ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.
ವಿಪಕ್ಷಗಳು ವಿರೋಧ ಮಾಡಬೇಕೆಂಬ ಕಾರಣಕ್ಕೆ ವಿರೋಧ ಮಾಡುತ್ತಿವೆ. ಎಲ್ಲ ಕಾರ್ಯಗಳನ್ನು ಟೀಕೆ ಮಾಡುವುದು ಅವರ ಜಾಯಮಾನ. ಕಾಂಗ್ರೆಸ್‌ ಬೌದ್ಧಿಕ ದಿವಾಳಿಯಾಗಿದ್ದು, ರಾಷ್ಟ್ರ
ಎಂದರೇನು? ರಾಷ್ಟ್ರದ ವಿಶ್ವಾಸ, ಸಂಬಂಧಗಳೇನು ಎಂಬುವುದರ ಬಗ್ಗೆ ಪರಿಕಲ್ಪನೆ ಇಲ್ಲದೆ, ಎಲ್ಲ ವಿಚಾರಗಳನ್ನು ವಿರೋಧ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಹವ್ಯಾಸ ಆಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್‌ ಆಡಳಿತ ಇರುವಾಗ ಬಾರಕ್‌ ಒಬಾಮ ಬಂದಿಲ್ವಾ?. ಇದಕ್ಕಿಂತಲೂ ಅದ್ಧೂರಿಯಾದ ಸ್ವಾಗತದೊಂದಿಗೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ಆಗ ಇವರು ಕಣ್ಣುಮುಚ್ಚಿ ಕುಳಿತ್ತಿದ್ದು ಯಾಕೆ?. ಆಗ ಏಕೆ ಇವರು ಅವಕಾಶ ನೀಡಿದರು ಎಂದು ಪ್ರಶ್ನಿಸಿದರು.
ಒಂದು ದೇಶದ ಜತೆಗೆ ಬಾಂಧವ್ಯ ವೃದ್ಧಿಸುವುದು ಹಾಗೂ ಎಲ್ಲ ದೇಶಗಳ ಜತೆಗೆ ಸಂಬಂಧ ಸುಧಾರಣೆ ಮಾಡುವುದು ಭಾರತದ ಪರಂಪರೆ. ಆದರೆ ಕಾಂಗ್ರೆಸ್‌ ಇದೆಲ್ಲವನ್ನು ಮರೆತಿದೆ‌ ಎಂದು ಕುಟುಕಿದರು.
ನೂತನ ಸಚಿವರು ಹಾಲಿನೊಂದಿಗೆ ಸಕ್ಕರೆ ಬೆರೆತಂತೆ ಸಿಹಿಯಾಗಿ ಒಟ್ಟಿಗೆ ನಮ್ಮ
ಜೊತೆಗಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಅಂತಹ ಬೆಳೆವಣಿಗೆಯು
ನಡೆಯುತ್ತಿಲ್ಲ. ನಮ್ಮಲ್ಲಿ ಮೂಲ ಬಿಜೆಪಿಗರು, ಬಂದವರು, ಹೋದವರು ಎಂಬುವುದಿಲ್ಲ.
ನಮ್ಮಲ್ಲಿಗೆ ಬಂದವರೆಲ್ಲರೂ ನಮ್ಮೊಂದಿಗೆ ಒಂದಾಗಿದ್ದಾರೆ ಎಂದರು.
ಸಿ.ಎಂ. ಇಬ್ರಾಹಿಂ ಯಾರ್ರೀ ಅವರು?. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದನ್ನು
ಬಿಟ್ಟು, ಕಾಂಗ್ರೆಸ್‌ಗೆ ಮೊದಲು ಅಧ್ಯಕ್ಷರನ್ನು ಆಯ್ಕೆ ಮಾಡಲಿ. ಕಾಂಗ್ರೆಸ್‌ ಉಳಿಸುವ
ಬಗ್ಗೆ ಚಿಂತನೆ ಮಾಡಲಿ ಎಂದು ತಿರುಗೇಟು ನೀಡಿದರು.