ಭಾರತದ ಮೇಲೆ ಟ್ರಂಪ್ ಶೇ.25 ಸುಂಕ; ವಿವಿಧ ದೇಶಗಳಿಗೆ ವಿಧಿಸಿದ ಸುಂಕಗಳ ಪಟ್ಟಿ ಹೀಗಿದೆ.!

ಸುಮಾರು 70ಕ್ಕೂ ಹೆಚ್ಚು ದೇಶಗಳ ಮೇಲೆ ಶೇ.10 ರಿಂದ ಶೇ.41 ರವರೆಗಿನ ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾಕ್ಸ್) ಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಜುಲೈ 31) ಸಹಿ ಹಾಕಿದರು. ಇದರಲ್ಲಿ ಭಾರತೀಯ ಆಮದುಗಳು 25% ಸುಂಕವನ್ನು ಎದುರಿಸಬೇಕಾಗುತ್ತದೆ.

ಅಕ್ರಮ ಮಾದಕವಸ್ತು ಬಿಕ್ಕಟ್ಟಿನ ಮೇಲೆ ಕ್ರಮ ಕೈಗೊಳ್ಳಲು ಕೆನಡಾ ಸಂಪೂರ್ಣ ವಿಫಲವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪ್ರತೀಕಾರವಾಗಿ ಅಲ್ಲಿನ ಆಡಳಿತವು ನಡೆದುಕೊಳ್ಳುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಕೆನಡಾದ ಮೇಲಿನ ಸುಂಕವನ್ನು 25% ರಿಂದ 35% ಕ್ಕೆ ಹೆಚ್ಚಿಸಿರುವುದಾಗಿ ಅಮೆರಿಕ ತಿಳಿಸಿದೆ.

ಕೆನಡಾ ಜೊತೆಗೆ ಇತರ ಹಲವಾರು ದೇಶಗಳಿಗೆ ನವೀಕರಿಸಿದ ಸುಂಕ ದರಗಳನ್ನು ಅಮೆರಿಕ ಬಿಡುಗಡೆ ಮಾಡಿದ್ದು, ಅದರ ಪಟ್ಟಿ ಈ ಕೆಳಕಂಡಂತಿದೆ.

  • 41% ಸುಂಕ: ಸಿರಿಯಾ
  • 40% ಸುಂಕ: ಲಾವೋಸ್, ಮ್ಯಾನ್ಮಾರ್ (ಬರ್ಮಾ)
  • 39% ಸುಂಕ: ಸ್ವಿಟ್ಜರ್​ಲೆಂಡ್
  • 35% ಸುಂಕ: ಇರಾಕ್, ಸೆರ್ಬಿಯಾ
  • 30% ಸುಂಕ: ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ
  • 25% ಸುಂಕ: ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ
  • 20% ಸುಂಕ: ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ
  • 19% ಸುಂಕ: ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್
  • 18% ಸುಂಕ: ನಿಕರಾಗುವಾ
  • 15% ಸುಂಕ: ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇನ್ನೂ ಅನೇಕ
  • 10% ಸುಂಕ: ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್, ಫಾಕ್‌ಲ್ಯಾಂಡ್ ದ್ವೀಪಗಳು

ಇನ್ನು ಯುರೋಪಿಯನ್ ಒಕ್ಕೂಟಕ್ಕೆ 15% ಕ್ಕಿಂತ ಹೆಚ್ಚಿನ US ಸುಂಕ ದರಗಳನ್ನು ಹೊಂದಿರುವ ಸರಕುಗಳಿಗೆ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, 15% ಕ್ಕಿಂತ ಕಡಿಮೆ ಸುಂಕ ದರಗಳನ್ನು ಹೊಂದಿರುವ ಸರಕುಗಳ ತೆರಿಗೆಗಳನ್ನು ಪ್ರಸ್ತುತ ಸುಂಕ ದರದಿಂದ 15% ರಷ್ಟು ಕಡಿಮೆ ಮಾಡಲು ಹೊಂದಿಸಲಾಗುತ್ತದೆ ಎಂದು ಅಮೆರಿಕ ತಿಳಿಸಿದೆ.

ಹೊಸ ಸುಂಕಗಳು ಯಾವಾಗ ಜಾರಿಗೆ ಬರುತ್ತವೆ?
ಇತ್ತೀಚಿನ ಕಾರ್ಯನಿರ್ವಾಹಕ ಆದೇಶವು ಪಾರಸ್ಪರಿಕ ತೆರಿಗೆ ದರಗಳನ್ನು ಪರಿಷ್ಕರಿಸುವುದಲ್ಲದೆ, ಯಾವಾಗ ಜಾರಿಗೊಳಿಸಲಾಗುತ್ತದೆ ಎಂಬುದರ ವೇಳಾಪಟ್ಟಿಯನ್ನು ಸಹ ಅಪ್​ಡೇಟ್​ ಮಾಡಿದೆ. ಹೊಸ ಸುಂಕಗಳನ್ನು ಜಾರಿಗೆ ತರುವ ಮೊದಲು ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಟ್ರಂಪ್ ಆರಂಭದಲ್ಲಿ ಆಗಸ್ಟ್ 1ರ ಗಡುವನ್ನು ನಿಗದಿಪಡಿಸಿದ್ದರು. ಈಗ ಪರಿಷ್ಕೃತ ಪಾರಸ್ಪರಿಕ ಸುಂಕಗಳನ್ನು ಎದುರಿಸುತ್ತಿರುವ 70ಕ್ಕೂ ಹೆಚ್ಚು ದೇಶಗಳಿಗೆ, ಆದೇಶಕ್ಕೆ ಸಹಿ ಹಾಕಿದ ಏಳು ದಿನಗಳ ನಂತರ ಹೊಸ ದರಗಳು ಜಾರಿಗೆ ಬರುತ್ತವೆ. ಆದಾಗ್ಯೂ, ಇಲ್ಲಿ ಕೆಲವು ವಿನಾಯಿತಿಗಳನ್ನು ಸಹ ಒಳಗೊಂಡಿದೆ. ಆಗಸ್ಟ್ 7 ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ಮತ್ತು ಅಕ್ಟೋಬರ್ 5 ರೊಳಗೆ ಅಮೆರಿಕವನ್ನು ತಲುಪುವ ಸರಕುಗಳು ಹೊಸ ದರಗಳಿಗೆ ಒಳಪಡುವುದಿಲ್ಲ.