ಮಂಗಳೂರು: ಶ್ವಾನ ಪ್ರೇಮಿ ರಜನಿ ಶೆಟ್ಟಿ ಮೇಲೆ ಹಲ್ಲೆ; ದೂರು ದಾಖಲು

ಮಂಗಳೂರು: ನಗರದ ಬಲಾಳ್ ಬಾಗ್‌ನ ಶ್ವಾನ ಪ್ರೇಮಿ ರಜನಿ ಶೆಟ್ಟಿ ಬಹು ಚರ್ಚಿತ ಹೆಸರು. ಪ್ರಾಣಿಗಳ ರಕ್ಷಣೆ ಮತ್ತು ಪೋಷಣೆಯಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಈ ನಿಸ್ವಾರ್ಥ ಸೇವೆಗಾಗಿ ಹಲವಾರು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನೂ ಇವರು ಪಡೆದಿದ್ದಾರೆ.

ಸೋಮವಾರದಂದು ರಜನಿ ಶೆಟ್ಟಿ ಅವರ ನೆರೆ ಮನೆಯವರು ಅವರ ಮೇಲೆ ದಾಳಿ ಮಾಡಿದ್ದು, ಆಕೆ ಮೇಲೆ ಕಲ್ಲೆಸಿದಿದ್ದಾರೆ. ಅದೃಷ್ಟವಶಾತ್ ರಜನಿ ಅವರು ಕಲ್ಲೇಟಿನಿಂದ ಗಾಯಗೊಳ್ಳುವುದು ತಪ್ಪಿದ್ದು, ಕೈಗೆ ಸಣ್ಣ ಏಟಾಗಿದೆ.

ಈ ಬಗ್ಗೆ ಸ್ಥಳೀಯ ಮಾಧ್ಯಮದ ಜೊತೆ ಮಾತನಾಡಿದ ರಜನಿ, “ನನ್ನ ನೆರೆ ಮನೆಯವರು ಕಳೆದ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ ಮತ್ತು ನನ್ನ ವಿರುದ್ಧ ದ್ವೇಷವನ್ನು ಇಟ್ಟುಕೊಂಡಿದ್ದಾರೆ. ನನ್ನ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿರುವ ನಾಯಿಗಳು ಬೊಗಳುವುದರಿಂದ ತೊಂದರೆಯಾಗುತ್ತಿದೆ ಎಂದು ನೆರೆಮನೆಯವರು ಆರೋಪಿಸುತ್ತಿದ್ದಾರೆ. ಕಳೆದ ಕೆಲವು ಸಮಯಗಳಿಂದ ತೊಂದರೆ ನೀಡುತ್ತಿದ್ದು, ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಈ ಬಾರಿ ಕಲ್ಲಿನಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದನ್ನು ಸಾಕ್ಷಿಯಾಗಿ ನೀಡಲಿದ್ದೇನೆ. ಪೊಲೀಸರು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.