ವೈದ್ಯರ ನಿಸ್ವಾರ್ಥ ಸೇವೆಗೊಂದು ದೊಡ್ಡ ಸಲಾಂ: ಲಾವಣ್ಯ ಬರೆದ ಡಾಕ್ಟರ್ ಡೇ ಸ್ಪೆಷಲ್ ಬರಹ

 ಲಾವಣ್ಯ, ದ್ವಿತೀಯ ಪತ್ರಿಕೋದ್ಯಮ ವಿಭಾಗ, ಭಂಡಾರ್ಕಾರ್ಸ್ ಪದವಿ ಕಾಲೇಜು, ಕುಂದಾಪುರ

 

ರೋಗ್ಯವೇ ಭಾಗ್ಯ ಎನ್ನುವ ಮಾತು ಸರ್ವಕಾಲಿಕವಾದದ್ದು. ಆರೋಗ್ಯವನ್ನು ರಕ್ಷಿಸಿ ರೋಗಿಗಳ ಆರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರ ರೀತಿಯಲ್ಲಿ ಕಾಣುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಮಾನವರಾದ ನಾವುಗಳು ದೇವರನ್ನು ಪೂಜಿಸುತ್ತೇವೆ ಮತ್ತು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೇವರ ಶಕ್ತಿ ಪಡೆದು ಕಣ್ಣೆದುರಿಗೆ ನಿಲ್ಲುವ ದೇವರು ಎಂದರೆ ತಪ್ಪಾಗಲಾರದು. ಆದ್ದರಿಂದಲೇ “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತು ಅಕ್ಷರಶಃ ಸತ್ಯವಾಗಿದೆ.
ಈ ಮಾತಿನ ನಿಜವಾದ ಅರ್ಥ ಕಳೆದೆರಡು ವರ್ಷಗಳಿಂದ ಜಗತ್ತು ಎದುರಿಸುತ್ತಿರುವ ಕೋರೊನಾದ ಕಾರಣದಿಂದಾಗಿ ಅರಿವಿಗೆ ಬಂದಿದೆ. ವೈದ್ಯರ ಹೊರತಾಗಿ ಈ ಮಹಾಮಾರಿಯನ್ನು ಎದುರಿಸುವ ವಿಚಾರ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಅದೇ ರೀತಿ ರೋಗಿಗಳ ಜೀವ ಉಳಿಸುವುದರಲ್ಲಿ ಪ್ರತಿಯೊಬ್ಬ ವೈದ್ಯರ ಪಾತ್ರ ಮಾತಿಗೆ ನಿಲುಕದ್ದು.
ಸಮಾಜದಲ್ಲಿ ವೈದ್ಯರ ಸ್ಥಾನ ಮತ್ತು ಅವರ ಜವಾಬ್ದಾರಿಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ರೋಗಿಗಳು ಯಾರೊಂದಿಗೂ ಹಂಚಿಕೊಳ್ಳಲು ಆಗದ ವಿಷಯಗಳನ್ನು ತಮ್ಮ ವೈದ್ಯರೊಂದಿಗೆ ಹಂಚಿಕೊಳ್ಳುವಷ್ಟು ಆತ್ಮೀಯತೆಯನ್ನು ವೈದ್ಯರು ತನ್ನ ರೋಗಿಗಳೊಡನೆ ಹೊಂದಿರುತ್ತಾರೆ.
ಅವರಿಗೆ ಶಾರೀರಿಕ ರೋಗವನ್ನು ಮಾತ್ರವಲ್ಲದೆ ತಮ್ಮ ಮಾತಿನ ಕೌಶಲ್ಯದಿಂದ ಮಾನಸಿಕ ರೋಗವನ್ನು ನಿವಾರಿಸುವ ನೈಪುಣ್ಯತೆಯನ್ನು ಹೊಂದಿರುತ್ತಾರೆ.ತಮ್ಮ ಮನೆಯಲ್ಲಿ ಏನೇ ಸಮಸ್ಯೆ ಇದ್ದರೂ ತಮ್ಮ ಕರ್ತವ್ಯ ಎಂದು ಬಂದ ಕೂಡಲೇ ನಗುಮುಖದಿಂದ ಶಾಂತರೂಪಿಯಾಗಿ ಜನರ ಸೇವೆಯಲ್ಲಿ ನಿರತರಾಗುತ್ತಾರೆ.
ನಮಗೆ ಅನಾರೋಗ್ಯ ಕಾಣಿಸಿಕೊಂಡಾಗ ಅಥವಾ ಆರೋಗ್ಯದಲ್ಲಿ ಏರುಪೇರು ಆದಾಗ ಬೇರೆ ವೈದ್ಯರ ಸಲಹೆ ತೆಗೆದುಕೊಂಡರೂ ಸಹ ಮನಸ್ಸಿಗೆ ತೃಪ್ತಿ ಎನಿಸುವುದಿಲ್ಲ, ಅದೇ ನಮ್ಮ ಕುಟುಂಬದ ವೈದ್ಯರು ಒಮ್ಮೆ ನಮ್ಮನ್ನು ಪರಿಶೀಲಿಸಿ ನಾಲ್ಕು ಧೈರ್ಯದ ಮಾತುಗಳನ್ನಾಡಿದರೆ ಏನೋ ನೆಮ್ಮದಿಯ ಅನುಭವ. ಹೀಗೆ ಕುಟುಂಬ ವೈದ್ಯರು ಸೇವೆಗೆ ಸದಾ ಮುಂಚೂಣಿಯಲ್ಲಿ ಇರುತ್ತಾರೆ.

ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ರಕ್ಷಿಸಿ ಅವರಿಗೆ ಮರುಜನ್ಮ ನೀಡುವ ವೈದ್ಯರಿಗೆ ಹಾಗೂ ಅವರ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ.