ಇತ್ತೀಚಿಗೆ ನಮ್ಮೂರಿನ ಜನರು ಬಳಲುತ್ತಿರುವ ಖಾಯಿಲೆಗಳಲ್ಲಿ ಬಾರೀ ಬದಲಾವಣೆಯನ್ನು ಎಲ್ಲರೂ ಗಮನಿಸಿರಬಹುದು. ಈ ಬದಲಾವಣೆಗಳೇನು? ಹೊಸ ಖಾಯಿಲೆಗಳು ಯಾವುವು? ಕಾರಣವೇನು? ಹಾಗೂ ಪರಿಹಾರೋಪಾಯಗಳ ಬಗ್ಗೆ ಲೇಖನ
ಅನಾದಿ ಕಾಲದಿಂದಲ್ಲೂ ಅನಾರೋಗ್ಯಕ್ಕೆ ಬ್ಯಾಕ್ಟೀರಿಯಾ ವೈರಸ್ ಗಳಂತಹ ಮೈಕ್ರೋಜೀವಿಗಳಿಂದ ಬರುತ್ತಿದ್ದ ಕಾಯಿಲೆಗಳು, ಸಮತೂಕದ ಆಹಾರದ ಮತ್ತು ನೈರ್ಮಲ್ಯದ ಕೊರತೆ, ಅನಾರೋಗ್ಯಕರ ವಾಸಸ್ಥಳ, ಚಿಕಿತ್ಸೆ ಪಡೆಯಲು ತಡ ಮಾಡುವುದು ಇತ್ಯಾದಿ ಕಾರಣಗಳೇ ಪ್ರಪಂಚದೆಲ್ಲೆಡೆಯಲ್ಲಿ ಮುಂಚೂಣಿಯಲ್ಲಿದ್ದವು. ಮೂಢನಂಬಿಕೆ, ಅಜ್ಞಾನ, ಬಡತನ ಹಾಗೂ ಹೆಚ್ಚಿನ ಜನಸಂಖ್ಯೆಯು ಮೂಲಕಾರಣವೆಂದು ಗುರುತಿಸಲಾಗಿತ್ತು. ಈಗ ಈ ಮೂಲ ಕಾರಣಗಳಿಂದ ಬಹು ಅಂಶ ಮುಕ್ತರಾಗಿ ಆಹಾರ, ವಾಸಸ್ಠಳ, ವೈದ್ಯಕೀಯ ಸವಲತ್ತುಗಳು ಉತ್ತಮವಾಗಿವೆ. ಸ್ವಚ್ಚತೆಯ ಪ್ರಾಮುಖ್ಯತೆ ಅರ್ಥವಾಗಿದೆ. ಆದರೂ ರಂಗೋಲಿಯ ಅಡಿ ನುಸುಳುವಂತೆ ಖಾಯಿಲೆಗಳು ನುಸುಳುತ್ತಿವೆ. ಕಾರಣವೇನು?

ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರೊಂದಿಗೆ ಬೇಳೆಕಾಳುಗಳು, ಹಣ್ಣು, ಬೀಜಪದಾರ್ಥ, ಮೀನು ಮೊಟ್ಟೆ, ಮಾಂಸ, ಹಾಲು, ಜ್ಯೂಸ್, ತಂಪುಪಾನೀಯ, ಐಸ್ ಕ್ರೀಂ ಇತ್ಯಾದಿಗಳ ಬಳಕೆಯಲ್ಲಿ ಏರಿಕೆ ಆಗಿದೆ. ಪರಿಣಾಮವಾಗಿ ಆಹಾರದಲ್ಲಿ ಕೊಬ್ಬು ಹಾಗೂ ಸಕ್ಕರೆ ಅಂಶದ ಬಳಕೆ ಹೆಚ್ಚಾಗಿದೆ. ಸಮಯದ ಅಭಾವದಿಂದ ಜನರು ಸಂಸ್ಕರಿತ ಹಾಗೂ ರೆಡೀಮೇಡ್ ಆಹಾರಗಳಿಗೆ ಮೊರೆ ಹೋಗುತ್ತಿದ್ದು, ಈ ಆಹಾರಗಳಲ್ಲಿರುವ ಬಣ್ಣಕ್ಕಾಗಿ, ರುಚಿಗಾಗಿ ಹಾಗೂ ಕೆಡದಂತೆ ಇಡಲು ಹಾಕಿದ ರಾಸಾಯನಿಕಗಳನ್ನೂ, ಆಹಾರವನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ನ ಅಂಶವನ್ನೂ ಹಣ್ಣುಗಳು ಮಾಗಲು ಹಾಕುವ ಸ್ಪ್ರೇಯನ್ನೂ ಅಯಾಚಿತವಾಗಿ ಸೇವಿಸುತ್ತಿದ್ದಾರೆ. ಕೃಷಿ ಲಾಭದಾಯಕವಾಗಲು ಬಳಸಿದ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳ ಅಂಶವೂ ದೊಡ್ಡ ಪ್ರಮಾಣದಲ್ಲಿ ನಮ್ಮ ಆಹಾರದಲ್ಲಿವೆ.

ಹೆಚ್ಚಿದ ವಾಹನಗಳ ಸಂಖ್ಯೆ, ಫ್ಯಾಕ್ಟರಿಗಳು, ಪ್ಲಾಸ್ಟಿಕ್ ಬಳಕೆ, ಕಸವನ್ನು ಎಸೆಯುವ ಅಭ್ಯಾಸ ಗಳಿಂದ ಪರಿಸರ, ನೀರು ವಾಯುವಿನ ಮಾಲಿನ್ಯ ಹೆಚ್ಚಾಗಿದ್ದು ನಮ್ಮ ಆಹಾರಗಳಾದ ತರಕಾರಿ, ಮೀನು ಹಾಗೂ ಮಾಂಸ ಮೊಟ್ಟೆಗಳಲ್ಲಿ, ಕುಡಿಯುವ ನೀರಿನಲ್ಲಿ, ಉಸಿರಾಡುವ ಗಾಳಿಯಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳು ಹಾಗೂ ರಾಸಾಯನಿಕಗಳ ಅಂಶ ಅಪಾಯಕಾರಿ ಮಟ್ಟಕ್ಕೇರಿದೆ. ಆಕಾಶದೆತ್ತರಕ್ಕೆ ಬೆಳೆದಿದ್ದ ಹಳೆಯ ಮರಗಳನ್ನು ಕಡಿದು ಶುದ್ದ ಗಾಳಿಗೆ ಕೊಡಲಿ ಹಾಕಿಕೊಂಡಿರುವುದು ಮಾತ್ರವಲ್ಲ, ಸೂರ್ಯನ ವಿಕಿರಣಗಳಿಗೆ ನೇರವಾಗಿ ಮೈಯೊಡ್ಡುತ್ತಿದ್ದೇವೆ. ಜೊತೆಗೆ ಧಾವಂತದ ಜೀವನಶೈಲಿಯನ್ನು ಮೈಗೂಡಿಸಿಕೊಂಡು ವ್ಯಾಯಾಮ ಮಾಡದೆ, ಸದಾ ಮೊಬೈಲು ಟಿವಿ ನೋಡುವ ಹವ್ಯಾಸ ಬೆಳೆಸಿಕೊಂಡು ಮನಸ್ಸಿಗೆ ಸಲ್ಲದ ಒತ್ತಡ ತಂದುಕೊಳ್ಳುತ್ತಿದ್ದೇವೆ. ಧೂಮಪಾನ ಮದ್ಯಪಾನದ ಜೊತೆಗೆ ಮಾದಕದ್ರವ್ಯಗಳ ದುಶ್ಚಟವು ಹೊಸದಾಗಿ ಸೇರಿಕೊಂಡಿದೆ.

ಹೊಸ ಜೀವನಶೈಲಿಯೇ ಕಾರಣ:
ಈ ಎಲ್ಲಾ ಕಾರಣಗಳಿಂದಾಗಿಯೇ ಇಂದು ನಮ್ಮ ಊರಿನಲ್ಲಿ ಸಕ್ಕರೆಖಾಯಿಲೆ, ಅಧಿಕ ರಕ್ತದೊತ್ತಡ ,ಬೊಜ್ಜು ದೇಹ, ಹೃದ್ರೋಗ, ಸ್ಟ್ರೋಕ್ ನಂತಹಾ ಖಾಯಿಲೆಗಳ ಸಂಖ್ಯೆಯಲ್ಲಿ ಮೂರುಪಟ್ಟು ಏರಿಕೆಯಾಗಿದೆ. ಕ್ಯಾನ್ಸರ್ ಖಾಯಿಲೆಯು ದಾಖಲೆಯ ಏರಿಕೆ ಕಾಣುತ್ತಿದೆ. ಗಂಟು ನೋವು, ಚರ್ಮರೋಗಗಳು, ಹಲ್ಲುಗಳ ಖಾಯಿಲೆಗಳು, ಕಣ್ಣಿನ ಖಾಯಿಲೆಗಳ ಸ್ವರೂಪದಲ್ಲೂ ಈ ಹೊಸ ಖಾಯಿಲೆಗಳ ದೆಸೆಯಿಂದ ಭಾರೀ ಬದಲಾವಣೆಯಾಗಿದೆ. ಮೂತ್ರದಲ್ಲಿ ಹಾಗೂ ಪಿತ್ತಕೋಶದಲ್ಲಿ ಕಲ್ಲುಗಳ ಖಾಯಿಲೆ, ಮೇದೋಜೀರಕ ಗ್ರಂಥಿಯ ಖಾಯಿಲೆ, ಥೈರಾಯ್ಡ ಗ್ರಂಥಿಯ ಖಾಯಿಲೆ, ಹೊಟ್ಟೆ ಹುಣ್ಣು ( ಅಲ್ಸರ್) , ಹರ್ನಿಯಾ , ಮೂಲವ್ಯಾಧಿ(ಪೈಲ್ಸ್) , ಮೂತ್ರಜನಕಾಂಗ ಹಾಗೂ ಪಿತ್ತಜನಕಾಂಗದ ವೈಫಲ್ಯ, ಮೆದುಳಿನ ರಕ್ತ್ರಸ್ರಾವ, ಹೃದಯಾಘಾತ ,ಅಫಘಾತಗಳು ಹಾಗೂ ಮಾನಸಿಕ ವ್ಯಾಧಿಗಳಿಂದ ಬಳಲುವವರ ಸಂಖ್ಯೆ ಏರಲು ಈ ಹೊಸ ಜೀವನಶೈಲಿಯೇ ಕಾರಣ. ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳು ಹಾಗೂ ವಿಕಿರಣಗಳು ಕೇವಲ ಕ್ಯಾನ್ಸರ್ ಖಾಯಿಲೆಯ ಜೊತೆಗೆ ಜನ್ಮತಃ ಬರುವ ಅಂಗವೈಕಲ್ಯಕ್ಕೂ ಕಾರಣೀಭೂತವಾಗಿದ್ದು ಈ ಖಾಯಿಲೆಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಅಕಸ್ಮಾತ್ತಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಜನಜೀವನಮಟ್ಟ ಸುಧಾರಿಸಿದಂತೆ ಮರೆಯಾಗಬಹುದು ಎಂದೆಣಿಸಿದ್ದ ಕ್ಷಯರೋಗವು ಸಕ್ಕರೆಖಾಯಿಲೆಯಂತಹಾ ಅನುಕೂಲಕಾರಿ ಸನ್ನಿವೇಶವನ್ನು ಬಳಸಿಕೊಂಡು ತನ್ನ ಗೃಧಮುಷ್ಟಿಯನ್ನು ಭದ್ರಗೊಳಿಸಿದೆ. ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು ವೃದ್ಧಾಪ್ಯ ಸಂಬಂಧಿತ ಖಾಯಿಲೆಗಳ ಪಟ್ಟಿಯನ್ನು ಬೇರೇಯೇ ಕೊಡಬಹುದು.

ಆದುದರಿಂದ ನಾವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರಬಹುದು, ಆದರೆ ನಮ್ಮ ಅಭಿವೃದ್ಧಿಯ ದಾರಿ ಆರೋಗ್ಯಕ್ಕೆ ಪೂರಕವಾಗಿರಬೇಕು ಎನ್ನುವುದನ್ನು ನಿರ್ಲಕ್ಷಿಸಿ ಮದ್ದಿಲ್ಲದ ಕಾಯಿಲೆಗಳಿಗೆ ಬಲಿಯಾಗುತ್ತಾ ನಮ್ಮ ಹೊಂಡವನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ ಎಂದೆನಿಸುವುದಿಲ್ಲವೆ? ಆದುದರಿಂದ ಅಭಿವೃದ್ಧಿಯ ನೀತಿಗಳನ್ನು ರೂಪಿಸುವಾಗ ಜನಾರೋಗ್ಯದ ಆಂಶಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುವುದು ಅತ್ಯಗತ್ಯ.

ಲೇಖಕರು: ಡಾ. ವೈ ಸುದರ್ಶನ್ ರಾವ್, ಇಂಚರ ಸರ್ಜಿಕಲ್ ಕ್ಲಿನಿಕ್, ಉಡುಪಿ





















