ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಇದು ಅಕ್ಷರಶ ಸತ್ಯ. ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸೊಳ್ಳೆಗಳ ನಿರ್ಮೂಲನವಾಗಬೇಕು ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಇದು ಪ್ರಶಂಸಾರ್ಹ. ಗಮನಿಸಬೇಕಾದ ಅಂಶವೆಂದರೆ ಈ ವರ್ಷ ಮಲೇರಿಯಾ ಜ್ವರವು ಅತಿ ಕಡಿಮೆ ವರದಿಯಾಗುತ್ತಿದೆ. ಮಲೇರಿಯಾ ಜ್ವರ ಹಾಗೂ ಡೆಂಗ್ಯೂ ಜ್ವರ ಎರಡಕ್ಕೂ ಸೊಳ್ಳೆಗಳೇ ವಾಹಕವಾಗಿರುವುದರಿಂದ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವ್ಯಾಪಕವಾಗಿದ್ದ ಮಲೇರಿಯಾ ಮಾತ್ರ ಈ ಬಾರಿ ಕಡಿಮೆಯಾಗಿ ಕೇವಲ ಡೆಂಗ್ಯೂ ಜ್ವರವೇ ವ್ಯಾಪಕವಾಗಿರಲು ಕಾರಣವೇನು? ಡೆಂಗ್ಯೂ ಜ್ವರ ಇಷ್ಟೊಂದು ವ್ಯಾಪಕವಾಗಿರಲು ಕೇವಲ ಸೊಳ್ಳೆಗಳು ಮಾತ್ರ ಕಾರಣವಾಗಿದ್ದಲ್ಲಿ ಮಲೇರಿಯಾ ಜ್ವರವೂ ಅಷ್ಟೇ ವ್ಯಾಪಕವಾಗಿ ಹರಡಬೇಕಾಗಿತ್ತಲ್ಲವೇ?
ಮೂಲತಃ ಮಲೇರಿಯಾ ಹಾಗೂ ಡೆಂಗ್ಯೂ ಜ್ವರಗಳು ನಮ್ಮ ಕರಾವಳಿ ಪ್ರದೇಶದ ಕಾಯಿಲೆಗಳಲ್ಲ. ನಮ್ಮ ಕರಾವಳಿ ಪ್ರದೇಶದ ಸೊಳ್ಳೆಯಿಂದ ಹರಡುವ ಕಾಯಿಲೆ ಎಂದರೆ ಆನೆಕಾಲು ರೋಗ. ಸೊಳ್ಳೆಗಳ ಹಾವಳಿ ವ್ಯಾಪಕವಾಗಿದ್ದರೂ ಆನೆಕಾಲು ರೋಗ ನಿಯಂತ್ರಣದಲ್ಲಿದೆ.
ಕರಾವಳಿ ಪ್ರದೇಶಕ್ಕೆ ಮಲೇರಿಯಾ ಜ್ವರ ಕಾಲಿಟ್ಟದ್ದು ಸುಮಾರು 25 ವರ್ಷಗಳ ಹಿಂದೆ. ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದ ಮಲೇರಿಯಾ ಕಾಯಿಲೆಯು ಅಲ್ಲಿನ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಕರಾವಳಿ ಪ್ರದೇಶಕ್ಕೆ ವಲಸೆ ಬಂದು ಅತ್ಯಂತ ನಿಕೃಷ್ಟ ವಸತಿ ಸೌಕರ್ಯದಲ್ಲಿ ವಾಸಿಸಿಕೊಂಡು ಇದ್ದರು. ಇವರು ಇಲ್ಲಿನ ಸೊಳ್ಳೆಗಳಿಂದ ಕಡಿಸಿಕೊಂಡಾಗ ಅವರ ರಕ್ತದಲ್ಲಿದ್ದ ಮಲೇರಿಯಾ ರೋಗಾಣುಗಳು ಇಲ್ಲಿನ ಸೊಳ್ಳೆಗಳಿಗೆ ವರ್ಗಾವಣೆಯಾದವು. ಇತ್ತೀಚೆಗೆ ಉತ್ತರ ಕರ್ನಾಟಕದವರ ಜೀವನ ಪರಿಸ್ಥಿತಿ ಸುಧಾರಿಸಿದ್ದು ಅವರು ಸಾಧಾರಣ ಮಟ್ಟಿಗೆ ಉತ್ತಮ ವಸತಿ ಸೌಕರ್ಯವನ್ನು ಒದಗಿಸಿಕೊಂಡಿದ್ದಾರೆ. ಆದುದರಿಂದ ನಮ್ಮಲ್ಲಿ ಈಗ ಮಲೇರಿಯಾ ಜ್ವರ ಕಡಿಮೆ ಆಗಿರುತ್ತದೆ.
ಆದರೆ ನಮ್ಮ ಕರಾವಳಿ ಪ್ರದೇಶಕ್ಕೆ ಡೆಂಗ್ಯೂ ಜ್ವರವನ್ನು ತಂದಿರುವುದು ಉತ್ತರ ಭಾರತದಿಂದ ವಲಸೆ ಬಂದಿರುವ ಜನರು. ಅವರು ಕಟ್ಟಡ, ಹೊಯಿಗೆ ಕಾರ್ಮಿಕರಾಗಿ, ಮೀನುಗಾರರಾಗಿ ಕಲ್ಲುಕ್ವಾರಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಅತ್ಯಂತ ನಿಕೃಷ್ಟ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದು ಸೊಳ್ಳೆಗಳಿಂದ ಕಡಿಸಿಕೊಂಡು ಅವರ ರಕ್ತದಲ್ಲಿರುವ ಡೆಂಗ್ಯೂ ರೋಗಾಣುಗಳು ನಮ್ಮ ಊರಿನ ಸೊಳ್ಳೆಗಳಿಗೆ ಹರಡುತ್ತಿದೆ.
ಈ ಕೆಲಸಗಾರರನ್ನು ಇಲ್ಲಿ ತರಿಸಿಕೊಂಡು ಅವರಿಗೆ ಟೆಂಟು ಶೆಡ್ಡು ಇತ್ಯಾದಿ ಸೊಳ್ಳೆಗಳಿಂದ ಮುಕ್ತವಾಗಿ ಕಡಿಸಿಕೊಳ್ಳಬಹುದಾದಂತಹ ವಸತಿ ಸೌಕರ್ಯವನ್ನು ಒದಗಿಸಿಕೊಟ್ಟ ನಮ್ಮವರೇ ಇದಕ್ಕೆ ಹೊಣೆಗಾರರು. ಆದುದರಿಂದ ಈ ಕೆಲಸದವರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಾಲೀಕರು ಕನಿಷ್ಠ ನಾಲ್ಕು ಗೋಡೆ ಕಿಟಕಿ ಬಾಗಿಲುಗಳು ಉಳ್ಳ ವಸತಿ ಸೌಕರ್ಯವನ್ನು ಅವರಿಗೆ ಒದಗಿಸ ಬೇಕು ಹಾಗೂ ಅವರೆಲ್ಲರಿಗೂ ಮಲಗುವಾಗ ಸೊಳ್ಳೆ ಪರದೆಯನ್ನು ಒದಗಿಸ ಬೇಕು ಹಾಗೂ ಅವರಿರುವ ವಸತಿ ಪ್ರದೇಶದಲ್ಲಿ ಶೌಚಾಲಯವು ಇರಲೇಬೇಕು ಹಾಗೂ ಅವರ ವಸತಿ ಪ್ರದೇಶದಲ್ಲಿ ಸೊಳ್ಳೆಗಳು ಹುಟ್ಟುವಂತಹ ಕೊಚ್ಚೆ ಪ್ರದೇಶ ಇರಕೂಡದು ಎಂಬ ನೀತಿಯನ್ನು ತುರ್ತಾಗಿ ಜಿಲ್ಲಾಡಳಿತವು ಜಾರಿಗೆ ತರಬೇಕಾಗಿದೆ. ಜೊತೆಗೆ ಯಾರೇ ಆದರೂ ಇತರರಿಗೆ ಬಾಡಿಗೆಗೆ ವಸತಿ ಸೌಕರ್ಯವನ್ನು ನೀಡಬೇಕಾದಲ್ಲಿ ಆ ವಸತಿಯಲ್ಲಿ ಶೌಚಾಲಯ ಹಾಗೂ ಆ ವಸತಿಯಿಂದ ಹೊರಬರುವ ಕೊಚ್ಚೆ ನೀರು ಮುಚ್ಚಿದ ಇಂಗು ಗುಂಡಿಗೆ ಹೋಗುವಂತಹ ವ್ಯವಸ್ಥೆಯು ಕಡ್ಡಾಯವಾಗಿ ಇರತಕ್ಕದ್ದು ಎಂಬ ನೀತಿಯನ್ನು ಜಾರಿಮಾಡಬೇಕಾಗಿದೆ.
ಲೇಖನ: ಡಾ ವೈ ಸುದರ್ಶನ್ ರಾವ್ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿ