ಆಫೀಸ್ ಕೆಲಸ, ಓದು, ಮೊಬೈಲ್ ಮತ್ತು ಟಿವಿ ವೀಕ್ಷಣೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ದಿನದ ಹೆಚ್ಚಿನ ಸಮಯವನ್ನು ಕುಳಿತುಕೊಂಡೇ ಕಳೆಯುತ್ತಿದ್ದಾರೆ. ವ್ಯಾಯಾಮದ ಕೊರತೆಯಷ್ಟೇ ಅಲ್ಲ, ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ದೀರ್ಘಕಾಲ ಕುಳಿತುಕೊಳ್ಳುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಹೀಗಾಗಿ ಕೆಲಸದ ಮಧ್ಯೆ ನಿಯಮಿತವಾಗಿ ಎದ್ದು ನಿಂತು ಸ್ವಲ್ಪ ನಡೆಯುವುದು ಅಥವಾ ವಿರಾಮ ತೆಗೆದುಕೊಳ್ಳುವುದು ಅಗತ್ಯ.
ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೂ ಪರಿಣಾಮ
ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು. ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಸಂಗ್ರಹವಾಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೂ ಪರಿಣಾಮ ಬೀರಬಹುದು.

ಕಾಲುಗಳ ರಕ್ತ ಪರಿಚಲನೆಗೆ ತೊಂದರೆ
ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಂಡಿರುವುದರಿಂದ ಕಾಲುಗಳಲ್ಲಿ ರಕ್ತ ಪರಿಚಲನೆ ಕಡಿಮೆಯಾಗಬಹುದು. ನಿರಂತರವಾಗಿ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ತೊಡೆಯ ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಸೂಚಿಸಿವೆ. ಆದರೆ ಮಧ್ಯೆ ಮಧ್ಯೆ ಎದ್ದು ನಡೆದಾಡುವುದರಿಂದ ಈ ಪರಿಣಾಮವನ್ನು ಕಡಿಮೆ ಮಾಡಬಹುದು.
ಎಷ್ಟು ಹೊತ್ತಿಗೊಮ್ಮೆ ಎದ್ದು ನಿಲ್ಲಬೇಕು?
ದೀರ್ಘಕಾಲ ನಿರಂತರವಾಗಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಮುಖ್ಯ. ಸಾಧ್ಯವಾದರೆ ಪ್ರತಿ 30 ನಿಮಿಷಕ್ಕೊಮ್ಮೆ ಎದ್ದು ನಿಂತು ಅಥವಾ ಕೆಲವು ನಿಮಿಷ ನಡೆದು ವಿರಾಮ ತೆಗೆದುಕೊಳ್ಳುವುದು ಉತ್ತಮ. ಕನಿಷ್ಠ ಪ್ರತಿ ಗಂಟೆಗೊಮ್ಮೆ ಎದ್ದು ದೈಹಿಕ ಚಟುವಟಿಕೆ ನಡೆಸುವ ಅಭ್ಯಾಸ ಮಾಡಿಕೊಳ್ಳಬಹುದು.
ನೀರು ಕುಡಿಯಲು, ಚಹಾ ತೆಗೆದುಕೊಳ್ಳಲು, ಸಹೋದ್ಯೋಗಿಯೊಂದಿಗೆ ಮಾತನಾಡಲು ಅಥವಾ ಸ್ವಲ್ಪ ನಡೆಯಲು ಎದ್ದು ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ. ವ್ಯಾಯಾಮಕ್ಕೆ ಸಮಯ ನೀಡುವುದರ ಜೊತೆಗೆ, ದಿನವಿಡೀ ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದೂ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದೆ.















