ರಸ್ತೆ, ಆಫೀಸ್ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಮೊದಲ ಕೆಲವು ನಿಮಿಷಗಳು ಬಹಳ ಮುಖ್ಯ. ಗಾಬರಿಯಾಗದೆ ಸರಿಯಾದ ಕ್ರಮ ತೆಗೆದುಕೊಂಡರೆ ವ್ಯಕ್ತಿಯ ಜೀವ ಉಳಿಸಲು ಸಹಾಯವಾಗಬಹುದು.
ಸಾಮಾನ್ಯವಾಗಿ ನಡೆದುಕೊಂಡು ಹೋಗುವಾಗ ಯಾರಾದರೂ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದರೆ ಏನು ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಭಯದಿಂದ ಅಲ್ಲಿಂದ ದೂರ ಹೋಗುತ್ತಾರೆ. ಇನ್ನೂ ಕೆಲವರು ಸಹಾಯಕ್ಕೆ ಧಾವಿಸುತ್ತಾರೆ. ಆದರೆ ಸಹಾಯ ಮಾಡುವಾಗ ತಪ್ಪು ಕ್ರಮ ಕೈಗೊಳ್ಳುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು. ಹಾಗಾಗಿ, ಯಾರಾದರೂ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಾಗ ಹೇಗೆ ಸ್ಪಂದಿಸಬೇಕು ಎಂಬ ಮೂಲಭೂತ ಮಾಹಿತಿ ಪ್ರತಿಯೊಬ್ಬರಿಗೂ ತಿಳಿದಿರುವುದು ಅಗತ್ಯ.

ಕುಸಿದು ಬಿದ್ದರೆ ತಕ್ಷಣ ಏನು ಮಾಡಬೇಕು?
ಮೊದಲಿಗೆ ಸ್ಥಳ ಸುರಕ್ಷಿತವಾಗಿದೆಯೇ ಎಂಬುದನ್ನು ಗಮನಿಸಿ. ನಂತರ ವ್ಯಕ್ತಿಯ ಬಳಿ ಹೋಗಿ ಮಾತನಾಡಿ, ಪ್ರತಿಕ್ರಿಯಿಸುತ್ತಾರೆಯೇ ಎಂದು ಪರಿಶೀಲಿಸಿ.
ಅವರು ಪ್ರತಿಕ್ರಿಯಿಸದಿದ್ದರೆ, ಸಾಮಾನ್ಯವಾಗಿ ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ. ತಕ್ಷಣವೇ ಸುತ್ತಮುತ್ತಲಿರುವವರ ಸಹಾಯ ಪಡೆದು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ.
ವ್ಯಕ್ತಿಯು ಪ್ರಜ್ಞಾಹೀನರಾಗಿದ್ದರೆ ನೀರು, ಜ್ಯೂಸ್ ಅಥವಾ ಆಹಾರವನ್ನು ನೀಡಬೇಡಿ. ನುಂಗಲು ಸಾಧ್ಯವಾಗದೆ ಅವು ಶ್ವಾಸನಾಳಕ್ಕೆ ಹೋಗುವ ಅಪಾಯವಿದೆ.
ವ್ಯಕ್ತಿಯು ಪ್ರಜ್ಞಾಹೀನರಾಗಿದ್ದು, ಸಾಮಾನ್ಯವಾಗಿ ಉಸಿರಾಡುತ್ತಿಲ್ಲ ಅಥವಾ ಕೇವಲ ಅಸಹಜವಾಗಿ ಉಸಿರಾಡುತ್ತಿದ್ದರೆ, ತಕ್ಷಣ CPR ಆರಂಭಿಸುವುದು ಅತ್ಯಂತ ಮುಖ್ಯ.
ಸಿಪಿಆರ್ ಮಾಡೋದು ಹೇಗೆ?
ವ್ಯಕ್ತಿಗೆ ಪ್ರಜ್ಞೆ ಇಲ್ಲ ಮತ್ತು ಸಾಮಾನ್ಯ ಉಸಿರಾಟವಿಲ್ಲ ಎಂದು ಕಂಡುಬಂದರೆ:
- ಎದೆಯ ಮಧ್ಯಭಾಗದಲ್ಲಿ ಕೈ ಇಡಿ: ವ್ಯಕ್ತಿಯನ್ನು ಗಟ್ಟಿಯಾದ, ಸಮತಟ್ಟಾದ ನೆಲದ ಮೇಲೆ ಮಲಗಿಸಿ. ಒಂದು ಕೈಯ ಹಸ್ತದ ಕೆಳಭಾಗವನ್ನು ಎದೆಯ ಮಧ್ಯಭಾಗದಲ್ಲಿ ಇಟ್ಟು, ಇನ್ನೊಂದು ಕೈಯನ್ನು ಅದರ ಮೇಲಿಡಿ.
- ಎದೆ ಒತ್ತುವಿಕೆ ಆರಂಭಿಸಿ: ಮೊಣಕೈಗಳನ್ನು ನೇರವಾಗಿಟ್ಟುಕೊಂಡು ಎದೆಯನ್ನು ದೃಢವಾಗಿ ಒತ್ತಿ.
- ವೇಗ: ಪ್ರತಿ ನಿಮಿಷಕ್ಕೆ ಸುಮಾರು 100–120 ಬಾರಿ ಎದೆ ಒತ್ತುವಿಕೆ ಮಾಡಬೇಕು.
- ಆಳ: ವಯಸ್ಕರಲ್ಲಿ ಸುಮಾರು 5 ಸೆಂ.ಮೀ. ಆಳಕ್ಕೆ ಎದೆ ಒತ್ತುವಿಕೆ ಮಾಡಬೇಕು.
- ಕೃತಕ ಉಸಿರಾಟ: CPR ತರಬೇತಿ ಪಡೆದಿದ್ದರೆ 30 ಎದೆ ಒತ್ತುವಿಕೆಗಳ ನಂತರ 2 ಕೃತಕ ಉಸಿರಾಟ ನೀಡಬಹುದು. ತರಬೇತಿ ಇಲ್ಲದಿದ್ದರೆ Hands-only CPR ಮುಂದುವರಿಸುವುದು ಉತ್ತಮ.
ಆಂಬ್ಯುಲೆನ್ಸ್ ಅಥವಾ ತುರ್ತು ವೈದ್ಯಕೀಯ ಸಿಬ್ಬಂದಿ ಬರುವವರೆಗೆ CPR ಮುಂದುವರಿಸಿ.
ವ್ಯಕ್ತಿಗೆ ಪ್ರಜ್ಞೆ ಇದ್ದರೆ?
ವ್ಯಕ್ತಿಯು ಪ್ರಜ್ಞೆಯಲ್ಲಿದ್ದು ಉಸಿರಾಡುತ್ತಿದ್ದರೆ, ಅವರನ್ನು ಆರಾಮವಾಗಿ ಕುಳಿತುಕೊಳ್ಳಲು ಅಥವಾ ಮಲಗಲು ಸಹಾಯ ಮಾಡಿ. ಬಿಗಿಯಾದ ಬಟ್ಟೆಗಳನ್ನು ಸಡಿಲಗೊಳಿಸಿ ಮತ್ತು ಸುತ್ತಲೂ ಜನದಟ್ಟಣೆ ಆಗದಂತೆ ನೋಡಿಕೊಳ್ಳಿ.
ವ್ಯಕ್ತಿಯು ಪ್ರಜ್ಞಾಹೀನರಾಗಿದ್ದರೂ ಸಾಮಾನ್ಯವಾಗಿ ಉಸಿರಾಡುತ್ತಿದ್ದರೆ, ಅವರನ್ನು ಬದಿಗೆ ತಿರುಗಿಸಿ Recovery Positionನಲ್ಲಿ ಇರಿಸಬಹುದು. ಇದರಿಂದ ವಾಂತಿ ಅಥವಾ ದ್ರವದಿಂದ ಉಸಿರಾಟದ ದಾರಿ ಮುಚ್ಚಿಕೊಳ್ಳುವ ಅಪಾಯ ಕಡಿಮೆಯಾಗಬಹುದು. ತುರ್ತು ವೈದ್ಯಕೀಯ ಸಹಾಯ ಬರುವವರೆಗೆ ಅವರ ಉಸಿರಾಟವನ್ನು ಗಮನಿಸುತ್ತಿರಿ.
ಮುಖ್ಯವಾಗಿ ನೆನಪಿಡಿ
❌ ಪ್ರಜ್ಞಾಹೀನ ವ್ಯಕ್ತಿಗೆ ನೀರು ಅಥವಾ ಆಹಾರ ನೀಡಬೇಡಿ.
❌ ಬಲವಂತವಾಗಿ ಎಬ್ಬಿಸಲು ಪ್ರಯತ್ನಿಸಬೇಡಿ.
❌ ಕಾರಣ ತಿಳಿಯದೆ ಔಷಧಿ ನೀಡಬೇಡಿ.
✅ ಪ್ರತಿಕ್ರಿಯೆ ಮತ್ತು ಉಸಿರಾಟ ಪರಿಶೀಲಿಸಿ.
✅ ತುರ್ತು ಸೇವೆಗೆ ಕರೆ ಮಾಡಿ.
✅ ಅಗತ್ಯವಿದ್ದರೆ ತಕ್ಷಣ CPR ಆರಂಭಿಸಿ.
ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ.















