‘ಇನ್ನು ಕಾರು ಚಾಲಕರೂ ಹೆಲ್ಮೆಟ್ ಧರಿಸಬೇಕೇ?’ ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ನೊಟೀಸ್ ಕೊಟ್ಟ ಎಐ ಕ್ಯಾಮರಾ: ಕ್ಯಾಮರಾ ಎಡವಟ್ಟಿಗೆ ನೆಟ್ಟಿಗರಿಂದ ಕಾಮಿಡಿ ಟ್ರೋಲ್!

ಚಿಕ್ಕೋಡಿ: ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚುವ ಎಐ ಕ್ಯಾಮೆರಾ ಕಾರೊಂದಕ್ಕೆ ‘ನೋ ಹೆಲ್ಮೆಟ್’ ದಂಡ ವಿಧಿಸಿರುವ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವರು ಅಂಬೇಡ್ಕರ್ ಸರ್ಕಲ್‌ ಮೂಲಕ ಕಾರಿನಲ್ಲಿ ಸಂಚರಿಸಿದ್ದರು. ಬಳಿಕ ಅವರ ವಾಟ್ಸ್‌ಆ್ಯಪ್‌ಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ನೋಟಿಸ್ ಬಂದಿದ್ದು, ಹೆಲ್ಮೆಟ್ ಧರಿಸದ ಆರೋಪದಲ್ಲಿ ₹500 ದಂಡ ವಿಧಿಸಲಾಗಿತ್ತು.

ನೋಟಿಸ್‌ನಲ್ಲಿ ಕಾರಿನ ಫೋಟೊವನ್ನೂ ಲಗತ್ತಿಸಲಾಗಿತ್ತು. ಕಾರಿಗೆ ‘ನೋ ಹೆಲ್ಮೆಟ್’ ದಂಡ ವಿಧಿಸಿರುವುದನ್ನು ಕಂಡು ಕಾರು ಮಾಲೀಕರು ಅಚ್ಚರಿಗೊಂಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಇನ್ನು ಕಾರು ಚಾಲಕರೂ ಹೆಲ್ಮೆಟ್ ಧರಿಸಬೇಕೇ?’ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಎಐ ಕ್ಯಾಮೆರಾದ ಕಾರ್ಯವೈಖರಿ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ.