ಬೆಳ್ತಂಗಡಿ: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ವೃದ್ದೆಯೊಬ್ಬರಿಗೆ ಲಡ್ಡು ಪ್ರಸಾದ ಮತ್ತು ಜ್ಯೂಸ್ ನೀಡಿ ಅಸ್ವಸ್ಥಳನ್ನಾಗಿಸಿ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆ Dharmasthala Police Station ನಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಜೆ.ಪಿ.ನಗರ ನಿವಾಸಿ ಪ್ರೇಮಾ ಕೆ. (70) ಅವರು ಮೇ 23ರಂದು ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಸಂಬಂಧಿಕರ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಳಿಕ ಮೇ 25ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ದೇವರ ದರ್ಶನದ ಬಳಿಕ ರಾತ್ರಿ ಊರಿಗೆ ತೆರಳಲು ದೇವಸ್ಥಾನದ ಮುಖ್ಯ ದ್ವಾರದ ಮುಂಭಾಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡು ಮಾತನಾಡಲು ಆರಂಭಿಸಿದ್ದಾನೆ. “ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತಂದಿದ್ದೇನೆ” ಎಂದು ಹೇಳಿ ಲಡ್ಡು ನೀಡಿ ಬಳಿಕ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾನೆ.
ಸ್ವಲ್ಪ ಜ್ಯೂಸ್ ಸೇವಿಸಿದ ಬಳಿಕ ಪ್ರೇಮಾ ಅವರು ಅಸ್ವಸ್ಥರಾಗಿದ್ದು, ಬಳಿಕ ಆರೋಪಿಯು ಅವರನ್ನು ದೇವಸ್ಥಾನದ ಮಹಾದ್ವಾರದ ಸಮೀಪದ ಕಟ್ಟೆಯ ಬಳಿ ಕೂರಿಸಿದ್ದಾನೆ. ಇದೇ ವೇಳೆ ಅವರ ಬ್ಯಾಗ್‌ನಲ್ಲಿದ್ದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಎಗರಿಸಿ, “ಬಸ್‌ನಲ್ಲಿ ಸೀಟು ಇದೆಯೇ ನೋಡಿ ಬರುತ್ತೇನೆ” ಎಂದು ಹೇಳಿ ಪರಾರಿಯಾಗಿದ್ದಾನೆ.
ಅಸ್ವಸ್ಥಗೊಂಡಿದ್ದ ವೃದ್ದೆಯನ್ನು ಸ್ಥಳೀಯರು ಉಜಿರೆಯ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

















