ಬೆಂಗಳೂರು: ಹಸಿರು ವಲಯದ 14 ಜಿಲ್ಲೆಗಳಲ್ಲಿ ಮೇ 7ರಿಂದ ಚಾಲನಾ ಪರವಾನಗಿ (ಡಿ.ಎಲ್) ಹಾಗೂ ಕಲಿಕಾ ಪರವಾನಗಿ (ಎಲ್.ಎಲ್) ಪರೀಕ್ಷೆಗಳು ನಡೆಯಲಿದ್ದು, ಪ್ರತಿದಿನ ಶೇ 50 ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಡಿ.ಎಲ್ ಹಾಗೂ ಎಲ್.ಎಲ್ ಪರೀಕ್ಷೆ ನಡೆಯುವ ದಿನಾಂಕ ಹಾಗೂ ವಿವರಗಳನ್ನು ಆಭ್ಯರ್ಥಿಗಳ ಮೊಬೈಲ್ಗೆ ರವಾನಿಸಲಾಗಿದೆ. ಆನ್ಲೈನ್ನಲ್ಲಿ ಈಗಾಗಲೇ ನೋಂದಾಯಿಸಿ, ಪರೀಕ್ಷೆಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಕಚೇರಿಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆಯಂತಹ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೇವೆ ಪಡೆಯಬಹುದು.
ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿನ ಸಾರಿಗೆ ಕಚೇರಿಗಳಲ್ಲಿ ವಾಹನ್-4 ತಂತ್ರಾಂಶದಡಿ ವಾಹನಗಳ ನೋಂದಣಿ, ವಾಹನದ ವರ್ಗಾವಣೆ, ಅರ್ಹತಾಪತ್ರ ನವೀಕರಣಗಳು ನಡೆಯುತ್ತಿವೆ. ಈ ವಲಯಗಳಲ್ಲಿ ಪರವಾನಗಿ ಸಂಬಂಧಿಸಿದ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.