ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಬಹಳ ಕಡಿಮೆಯಾಗಿದೆ. ರಾತ್ರಿಯಿಂದ ವರುಣ ಶಾಂತನಾಗಿದ್ದು ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟವೂ ಇಳಿಕೆಯಾಗಿದೆ.
ಆದ್ರೆ ಭಾರೀ ಮಳೆಗೆ ತತ್ತರಿಸಿದ್ದ ಬಂಟ್ವಾಳ ತಾಲೂಕು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ, ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳ ಅವಾಂತರ ಸೃಷ್ಟಿಯಾಗಿದೆ.
ನೆರೆ ಪೀಡಿತ ಸ್ಥಳಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮಾಜಿ ಸಚಿವ ಯುಟಿ ಖಾದರ್ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸದ್ಯ ರೆಡ್ ಅಲರ್ಟ್ ಇದ್ದು ಭಾರೀ ಮಳೆಯಿಂದ ಹಲವು ಕಡೆ ಭೂಕುಸಿತಗಳಾಗಿವೆ. ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ದಕ್ಷಿಣ ಕನ್ನಡದ ವಿವಿಧೆಡೆ ಒಟ್ಟು 31 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಇಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಆಶ್ರಯ ನೀಡಲಾಗಿದೆ. ಚಾರ್ಮಾಡಿ ರಸ್ತೆಯನ್ನು ಮುಚ್ಚಲಾಗಿದೆ. ಅರಬ್ಬೀ ಸಮುದ್ರದ ಅಲೆಗಳು 3.5 ರಿಂದ 4.0 ಮೀಟರ್ ಗಳಷ್ಟು ಎತ್ತರವಿದೆ. ಹೀಗಾಗಿ ಮೀನುಗಾರರು ಸಮುದ್ರ ಪ್ರವೇಶಿಸದಂತೆ ಸೂಚನೆ ನೀಡಲಾಗಿದೆ. ಎನ್ ಡಿಆರ್ಎಫ್, ಕೋಸ್ಟ್ ಗಾರ್ಡ್, ಹೋಮ್ ಗಾರ್ಡ್ ತಂಡಗಳನ್ನು ನಿಯೋಜಿಸಲಾಗಿದೆ. ಭಾರೀ ಮಳೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ ಆರು ತಾಲೂಕುಗಳ 73 ಗ್ರಾಮಗಳು ನೆರೆಯಿಂದ ಸಂಕಷ್ಟಗೊಳಗಾಗಿವೆ.