ದ.ಕ–ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌: ನೂತನ ಅಧ್ಯಕ್ಷರಾಗಿ ‘ಯಶ್‌ಪಾಲ್‌ ಸುವರ್ಣ’ ಪುನರಾಯ್ಕೆ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ನೂತನ
ಅಧ್ಯಕ್ಷರಾಗಿ ಸತತ 4ನೇ ಅವಧಿಗೆ ಯಶ್‌ಪಾಲ್‌ ಎ. ಸುವರ್ಣ ಅವರು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪುರುಷೋತ್ತಮ್‌ ಅಮೀನ್‌ ಉಳ್ಳಾಲ ಅವರು ಪುನರಾಯ್ಕೆಯಾಗಿದ್ದಾರೆ.
ಬುಧವಾರ ನಡೆದ ಫೆಡರೇಶನ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಮಂಗಳೂರಿನ ಲೆಕ್ಕಪರಿಶೋಧನಾ ಉಪನಿರ್ದೇಶಕ ಮಹೇಶ್ವರಪ್ಪ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯಶ್‌ಪಾಲ್‌ ಸುವರ್ಣ ಅವರು 2009ರಲ್ಲಿ ಫೆಡರೇಶ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸಿಲ್‌ ಮಾರಾಟ, ಮೀನುಗಾರಿಕಾ ಸಲಕರಣೆಗಳ ಮಾರಾಟ ಹಾಗೂ ನೂತನ ಬ್ಯಾಂಕಿಂಗ್‌ ವಿಭಾಗವನ್ನು ಆರಂಭಿಸಿದರು. ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಅನುಷ್ಠಾನಗೊಳಿಸಿ 46 ಕೋಟಿಗಳಷ್ಟು ಇದ್ದ ಸಂಸ್ಥೆಯ ವ್ಯವಹಾರವನ್ನು ಸುಮಾರು 250 ಕೋಟಿಗಳಿಗೆ ತಲುಪಿಸಿದ್ದಾರೆ.
ಫೆಡರೇಶ್‌ನ ಎಲ್ಲಾ ಶಾಖೆಗಳು ಗಣಕೀಕರಣಗೊಂಡು ಅಂತರ್ಜಾಲ ಹೊಂದಿ ಬ್ಯಾಂಕಿಂಗ್‌
ವ್ಯವಹಾರಗಳನ್ನು ಶೆಡ್ಯೂಲ್‌ ಬ್ಯಾಂಕುಗಳ ರೀತಿಯಲ್ಲಿ ಖಾತೆಗಳ ವಿವರಗಳನ್ನು ಖಾತೆದಾರರ ಮನೆ ಬಾಗಿಲಿಗೆ ನೀಡಲಾಗುತ್ತಿದೆ.
ಫೆಡರೇಶನ್‌ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 85 ಸದಸ್ಯ ಸಹಕಾರಿ ಸಂಸ್ಥೆಗಳನ್ನು (1 ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡ), ಸುಮಾರು 14,000 ದಷ್ಟು
ವೈಯಕ್ತಿಕ ಸದಸ್ಯರನ್ನು ಹೊಂದಿರುತ್ತದೆ. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು
ಮಾರಾಟ ಫೆಡರೇಶನ್‌ ಈ ಹಿಂದೆ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂದರ್ಭದಲ್ಲಿ
ಯಶ್‌ಪಾಲ್‌ ಅಧ್ಯಕ್ಷರಾಗಿ ಸಂಸ್ಥೆಯ ನೇತೃತ್ವ ವಹಿಸಿಕೊಂಡ ಬಳಿಕ ನಿರಂತರವಾಗಿ ಲಾಭ
ಗಳಿಸುತ್ತ 10 ವರ್ಷಗಳಲ್ಲಿ ಸುಮಾರು 40 ಕೋಟಿ ಲಾಭವನ್ನು ದಾಖಲಿಸಿದೆ.
ಸಂಸ್ಥೆಯ ಲಾಭಾಂಶದಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಂಸ್ಥೆಯ ಸದಸ್ಯರಿಗೆ ಉಚಿತ ಆರೋಗ್ಯ ಕಾರ್ಡ್‌ ವಿತರಣೆ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ವಿತರಣೆ, ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಮತ್ತು ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು
ನೀಡುತ್ತಾ ಬಂದಿರುತ್ತದೆ.
ವಿಶಿಷ್ಟ ಕಾರ್ಯ ಚಟುವಟಿಕೆಯ ಮೂಲಕ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್‌ ವ್ಯವಹಾರವನ್ನು ವಿಸ್ತರಿಸಿ ಹೊಸ ಶಾಖೆಗಳ ಆರಂಭ, ಮೀನುಗಾರರ ಆರ್ಥಿಕ ಸ್ವಾವಲಂಬನೆಗಾಗಿ ಸುಮಾರು 25 ಸಾವಿರ ಸದಸ್ಯರನ್ನೊಳಗೊಂಡ ಸ್ವಸಹಾಯ ಸಂಘಗಳ ರಚನೆಯ ಮೂಲಕ ಶೇ. 2 ಬಡ್ಡಿ ದರದಲ್ಲಿ ಸಾಲ ವಿತರಣೆ, ಮೀನು ಸೇವನೆ ಪ್ರೋತ್ಸಾಹಿಸುವ ಹಾಗೂ ಗ್ರಾಹಕರಿಗೆ ತಾಜಾ ಮೀನು ಖಾದ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮತ್ಸ್ಯ ಕ್ಯಾಂಟಿನ್‌ ಆರಂಭ, ಮೀನು ಸಂಸ್ಕರಣ ಘಟಕ ಹಾಗೂ ಶಿತಲೀಕರಣ ಘಟಕ ಸ್ಥಾಪನೆ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲು ನೂತನ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪುರುಷೋತಮ್‌ ಅಮೀನ್ ಉಳ್ಳಾಲ, ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಆನಂದ್ ಎ, ಸತೀಶ್  ಆರ್‌ ಸಾಲ್ಯಾನ್, ರಾಮಚಂದ್ರ ಕುಂದರ್‌, ಶಿವಾಜಿ ಎಸ್‌. ಅಮೀನ್, ದೇವಪ್ಪ ಕಾಂಚನ್‌, ಸುರೇಶ್‌ ಸಾಲ್ಯಾನ್‌, ರಾಮ ಕಾಂಚನ್‌, ಚಿದಾನಂದ, ಸುಧೀರ್‌ ಶ್ರೀಯಾನ್‌, ಉಷಾರಾಣಿ, ಸುಧಾಕರ್‌, ಬೇಬಿ ಎಚ್. ಸಾಲ್ಯಾನ್‌ ಮತ್ತು ಇಂದಿರಾ ಉಪಸ್ಥಿತರಿದ್ದರು.