ಹಿರಿಯರ ಮಾತಿಗೆ ಬೆಲೆ ಕೊಟ್ಟು ತಲೆಬಾಗಬೇಕಾಯಿತು; ತಾಳ್ಮೆ ಕಾಯ್ದುಕೊಳ್ಳಿ: ಅಭಿಮಾನಿಗಳಿಗೆ ಡಿಕೆಶಿ ಕರೆ

ಕನಕಪುರ: ಮುಖ್ಯಮಂತ್ರಿ ಪಟ್ಟಕ್ಕಾಗಿ ತಮ್ಮ ಆಕಾಂಕ್ಷೆಗಳನ್ನು ಜೀವಂತವಾಗಿರಿಸಿಕೊಂಡಿರುವ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ “ತಾಳ್ಮೆಯಿಂದ” ಇರಿ ಮತ್ತು “ನಿರಾಶೆಗೊಳ್ಳಬೇಡಿ” ಎಂದು ಕೇಳಿಕೊಂಡಿದ್ದಾರೆ.

ದೊಡ್ಡ ಜವಾಬ್ದಾರಿಯಾದ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂದು ನೀವೆಲ್ಲರೂ ಭಾವಿಸಿ ಪ್ರೀತಿಯ ಸುರಿಮಳೆಗೈದಿದ್ದೀರಿ, ಯಾರೂ ನಿರಾಶರಾಗುವ ಅಗತ್ಯವಿಲ್ಲ ಎಂದು ಶನಿವಾರ ತಮ್ಮ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ತಮ್ಮನ್ನು ಅಧಿಕಾರಕ್ಕೆ ತಂದ ಮತದಾರರಿಗೆ ಅವರು ಧನ್ಯವಾದ ಅರ್ಪಿಸಿ ಮಾತನಾಡಿ, ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನೀವು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ನೀಡಿದ್ದೀರಿ. ಆದರೆ ಏನು ಮಾಡುವುದು, ಒಂದು ನಿರ್ಧಾರ ತೆಗೆದುಕೊಳ್ಳಲಾಯಿತು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ಸಲಹೆ ನೀಡಿದ್ದಾರೆ. ಹಿರಿಯರ ಮಾತಿಗೆ ತಲೆ ಬಾಗಬೇಕಾಗಿ ಬಂದಿದ್ದು, ನಾನು ತಾಳ್ಮೆಯಿಂದ ಇರಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.

ಆದರೆ ನಾನು ನಿಮಗೆ ಹೇಳಲು ಬಯಸುತ್ತೇನೆ (ನನ್ನನ್ನು ಮುಖ್ಯಮಂತ್ರಿಯಾಗಿ ನೋಡುವ) ನಿಮ್ಮ ಆಸೆ ಎಂದಿಗೂ ಸುಳ್ಳಾಗುವುದಿಲ್ಲ. ತಾಳ್ಮೆಯಿಂದ ಇರೋಣ ಎಂದು ಅವರು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಯು ಕಾಂಗ್ರೆಸ್ ಹೈಕಮಾಂಡ್‌ನಿಂದ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಅಂತಹ ಯಾವುದೇ ಸಾಧ್ಯತೆಗಳನ್ನು ನಿರಾಕರಿಸಿದ್ದಾರೆ ಮತ್ತು ತಮ್ಮ ನಾಯಕ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿಯೆ ಮುಂದುವರಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈಗ ಡಿಕಿಶಿ ಅವರ ಈ ಹೇಳಿಕೆಯು ಜನರ ಹುಬ್ಬೇರುವಂತೆ ಮಾಡಿದೆ.