ಪತ್ರಕರ್ತರು ಗ್ರಾಮವಾಸ್ತವ್ಯ ಮಾಡಿದ ಕುತ್ಲೂರು ಶಾಲೆಯಲ್ಲಿ ಅಭಿವೃದ್ಧಿ ಪರ್ವ, ಜಿಲ್ಲೆಗೆ ೬೫ ಕೋಟಿ ಪರಿಹಾರ ನೀಡಲು ಸರಕಾರಕ್ಕೆ ಪ್ರಸ್ತಾವಣೆ: ಡಾ| ಆರ್. ಸೆಲ್ವಮಣಿ 

ಬೆಳ್ತಂಗಡಿ: ಪತ್ರಕರ್ತರ ಗ್ರಾಮವಾಸ್ತವ್ಯದ ಬಳಿಕ ಕುಗ್ರಾಮ ಕುತ್ಲೂರಿಗೆ ಪರಿವರ್ತನೆಯ ಅವಕಾಶ ಲಭಿಸಿದೆ. ಅಧಿಕಾರಿಗಳು ಹಾಗೂ ಸಂಸ್ಥೆಗಳ ಸಹಕಾರದಲ್ಲಿ ಕುತ್ಲೂರು ಸರಕಾರಿ ಶಾಲೆಯ ಹಲವು ಬೇಡಿಕೆಗಳನ್ನು ಈಡೇರಿಸಿರುವ ಪತ್ರಕರ್ತರು ಉಳಿದ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸವಿದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಹೇಳಿದರು.
ಕುತ್ಲೂರು ಸ.ಹಿ.ಪ್ರಾ. ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗು ದ.ಕ. ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘ ಮಂಗಳೂರು ಹಾಗೂ ಕುತ್ಲೂರು ಸ.ಹಿ.ಪ್ರಾ. ಶಾಲೆ ಶಾಲಾಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆ.೨೧ರಂದು ಜರಗಿದ ಶಾಲಾ ಅಕ್ಷರ ಕೈತೋಟ, ವಾಚನಾಲಯ, ಕಂಪ್ಯೂಟರ್ ತರಗತಿ ಹಾಗೂ ವಲಯ ಮಟ್ಟದ ಕಬ್ಬಡ್ಡಿ ಪಂದ್ಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
65 ಕೋಟಿ ಪ್ರಸ್ತಾವನೆ:
ಮಳೆಹಾನಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ರೂ. 65 ಕೋಟಿ ನಷ್ಟವಾಗಿರುವ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಪರಿಹಾರಕ್ಕಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದರು.
ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೈ. ಶಿವರಾಮಯ್ಯ ಮಾತನಾಡಿ, ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಒಲವಿನೊಂದಿಗೆ ಒಗ್ಗಟ್ಟಿನಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಿರುವುದು ಶ್ಲಾಘನೀಯ. ಈ ಗ್ರಾಮಕ್ಕೆ ಪತ್ರಕರ್ತರ ಸಹಕಾರ ನಿರಂತರವಾಗಿ ದೊರೆಯಲಿ ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ  ಮಾತನಾಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಶಿಫಾರಸ್ಸಿನಂತೆ ಕುಗ್ರಾಮವಾದ ಕುತ್ಲೂರನ್ನು ಗ್ರಾಮವಾಸ್ತವ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಸಂಘದಿಂದ ಗ್ರಾಮ ವಾಸ್ತವ್ಯ ಮಾಡಿ ಇಲ್ಲಿನ ಗ್ರಾಮದ ಸಮಸ್ಯೆಯನ್ನು ಅರಿತುಕೊಂಡು ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇನ್ನುಳಿದಂತೆ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಿಕಾ ಭವನ ಟ್ರಸ್ಟ್  ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಪೂವಣಿ, ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗಣೇಶ್ ಐತಾಳ್, ಕುತ್ಲೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ದೇವಾಡಿಗ, ನಾರಾವಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋದ, ಶಿಕ್ಷಣ ಇಲಾಖೆಯ ಸಿಆರ್‌ಪಿ ಸಂತೋಷ್, ನಾರಾವಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿ, ಕಾರ್ಯದರ್ಶಿ ನಿರ್ಮಲ್ ಕುಮಾರ್  ಮತ್ತಿತರರು ಉಪಸ್ಥಿತರಿದ್ದರು. ‌ರಾಮಚಂದ್ರ ಭಟ್ ಕುತ್ಲೂರು ಪ್ರಾಸ್ತಾವಿಸಿದರು. ಕುತ್ಲೂರು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಪ್ರಶಾಂತ್ ಸ್ವಾಗತಿಸಿ, ಶಿಕ್ಷಕಿ ರೂಪಾ ಕುಮಾರಿ ವಂದಿಸಿದರು. ಶಿಕ್ಷಕ ಸುರೇಶ್ ಕಾರ್ಯಕ್ರಮ ರೂಪಿಸಿದರು.