ಮಂಗಳೂರು: ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಗುಡುಗು ಸಹಿತ ಸುರಿದ ಭಾರೀ ಮಳೆಗೆ ವಿವಿಧೆಡೆ ಹಾನಿ ಉಂಟಾಗಿದೆ.
ಸಂಜೆ ವೇಳೆ ಬೀಸಿದ ಭಾರಿ ಗಾಳಿ ಮಳೆಗೆ ಸುಬ್ರಹ್ಮಣ್ಯ ಸುತ್ತಮುತ್ತಲ ಕೆಲವು ಪ್ರದೇಶಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ ಉಂಟಾಯಿತು. ಅಲ್ಲದೆ ಕೆಲವು ಮನೆಗಳಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ಗಳು ಗಾಳಿಗೆ ಹಾರಿ ಹೋಗಿದೆ. ಸುಬ್ರಹ್ಮಣ್ಯದ ಬಿಲದ್ವಾರದ ವಾಲಗದ ಕೇರಿ ನಿವಾಸಿ ಆನಂದ ಎಂಬವರ ಮನೆಯ ಮೇಲೆ ಗಾಳಿಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಗಾಳಿಗೆ ವಿದ್ಯುತ್ ಕಂಬ, ತಂತಿ, ಮರಗಳು ನೆಲಕ್ಕುರಳಿವೆ.
ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲ ಪ್ರದೇಶ ಹಾಗೂ ಕುಮಾರ ಪರ್ವತ ಭಾಗಗಳಲ್ಲಿ ಭಾರಿ ಗಾಳಿ ಮಳೆಯಾಯಿತು. ಮಳೆಯ ನೀರಿನಿಂದ ಬರಿದಾಗಿದ್ದ ನದಿ ಹಳ್ಳ, ತೊರೆಗಳು ಸ್ವಲ್ಪ ಮಟ್ಟಿಗೆ ತುಂಬಿ ಹರಿಯುವಂತಾಯಿತು.
ಸುಬ್ರಹ್ಮಣ್ಯ ಅಲ್ಲದೇ ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಗುತ್ತಿಗಾರು, ಬಳ್ಪ ಬಿಳಿನೆಲೆ, ಪಂಜ, ಕೈಕಂಬ, ನೆಲ್ಯಾಡಿ ಕಡೆಗಳಲ್ಲಿ ಕೂಡ ಬಾರಿ ಗಾಳಿ ಮಳೆಯಾಗಿದೆ.
ಅಲ್ಲದೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ರಸ್ತೆ ಅಗಲೀಕರಣ ಹಾಗೂ ಮೋರಿ ಕಾಮಗಾರಿ ನಡೆಯುತ್ತಿದ್ದು, ಜೋರಾಗಿ ಸುರಿದ ಮಳೆ ನೀರಿನಿಂದ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಹಾಗೂ ಮುಖ್ಯ ರಸ್ತೆಯ ಕುಮಾರದಾರ ಭಾಗಗಳಲ್ಲಿ ಮಳೆ ನೀರು ನಿಂತು ದ್ವೀಪ ದಂತಾಯಿತು. ಇದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು.
ಸುಳ್ಯ ಭಾಗದಲ್ಲಿ ಮಾತ್ರವಲ್ಲದೇ ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಜೆ ಹಾಗೂ ರಾತ್ರಿಯ ವೇಳೆ ಗಾಳಿ ಸಹಿತ ಮಳೆಯಾಗಿದೆ.