ಮಂಗಳೂರು: ಲಾಕ್ಡೌನ್ ಬಳಿಕ ಜೂ. 8ರಂದು ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಹೀಗಾಗಿ ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಕೋವಿಡ್-19 ವೈರಸ್ ಕಾರಣದಿಂದ ದೇವಸ್ಥಾನಗಳಿಗೆ ಎರಡೂವರೆ ತಿಂಗಳಿನಿಂದ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಸದ್ಯ ಬಹುತೇಕ ಲಾಕ್ ಡೌನ್ ನಿರ್ಬಂಧಗಳು ಸಡಿಲಿಕೆ ಮಾಡಿ ಇಂದಿನಿಂದ ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ದೇವರ ದರ್ಶನಕ್ಕೆ ಪಡೆಯಲು ಅವಕಾಶ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ:
ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಗಾರಾಧನೆಗೆ ಪ್ರಸಿದ್ದಿ ಪಡೆದ ಕುಕ್ಕೆ ದೇಗುಲಕ್ಕೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದು, ಪ್ರವೇಶ ದ್ವಾರದಲ್ಲಿ ದೇಗುಲ ಸಿಬ್ಬಂದಿ, ಭಕ್ತರನ್ನು ಸಾಮಾಜಿಕ ಅಂತರದ ಮೂಲಕ ಒಳ ಬಿಡುತ್ತಿದ್ದಾರೆ.
ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕಾನ್ ಮಾಡಿ, ಸ್ಯಾನಿಟೈಸರ್ ನೀಡಲಾಗುತ್ತಿದೆ. ವಿಶೇಷ ಸೇವೆಗಳಾದ ಸರ್ಪ ಸಂಸ್ಕಾರ, ಅಶ್ಲೇಷಪೂಜೆ ಮತ್ತು ಛತ್ರದ ವ್ಯವಸ್ಥೆ ಇಲ್ಲ. ಮುಖ್ಯ ದ್ವಾರದಲ್ಲಿ ಗುರುತಿಸಿದಂತೆ ಅಗಮಿಸಿ ಹಿಂದಿನಿಂದ ಹೊರ ತೆರಳಲು ಈಗಾಗಲೇ ಸಿದ್ದತೆ ಮಾಡಲಾಗಿದೆ.
ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ:
ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ರಾಜ್ಯ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಮುಜರಾಯಿ ಸಚಿವರು. ಬಹಳಷ್ಟು ದಿನಗಳ ನಂತರ ಕೊವಿಡ್ ನಿಂದ ಮುಚ್ಚುಗಡೆ ಗೊಂಡ ರಾಜ್ಯದ ಮುಜರಾಯಿ ಕ್ಷೇತ್ರಗಳನ್ನ ಕೇಂದ್ರದ ಮಾರ್ಗ ದರ್ಶನದಂತೆ ಇಂದು ತೆರೆಯಲಾಗಿದೆ. ಹಿರಿಯರು ಮಕ್ಕಳನ್ನ ಆರೋಗ್ಯದ ದೃಷ್ಡಿಯಿಂದ ನಿರ್ಬಂಧ ಮಾಡಲಾಗಿ, ಸಾಮಾಜಿಕ ಅಂತರ ,ಮಾಸ್ಕ್ ಧರಿಸುವ ಮೂಲಕ ದೇವರ ದರುಶನ ಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ ಎಂಬುದಾಗಿ ತಿಳಿಸಿದರು.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರ:
ಲಾಕ್ ಡೌನ್ ಬಳಿಕ ಸ್ಥಗಿತವಾಗಿದ್ದ ನಾಡಿನ ಪ್ರಸಿದ್ಧ ದೇಗುಲ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ಮತ್ತೆ ಭಕ್ತರಿಗಾಗಿ ತೆರದಿದ್ದು, ದೇವಸ್ಥಾನದ ಒಳ ಪ್ರವೇಶ ಮಾಡುವವರು ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕಾಗಿದೆ ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅನ್ನ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಭಕ್ತರು ಮುಡಿ ನೀಡಲು ಹಾಗೂ ನೇತ್ರಾವತಿ ನದಿಯಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಕಲ್ಪಿಸಲಾಗಿದೆ.