ವಾಮಂಜೂರು: ಇಲ್ಲಿನ ಆಶ್ರಯ ನಗರದ ಬಳಿ ಇರುವ ಅಣಬೆ ಫ್ಯಾಕ್ಟರಿಯಿಂದಾಗಿ ಪರಿಸರ ಮಾಲಿನ್ಯವಾಗುತ್ತಿದ್ದು ಜನರಿಗೆ ಆರೋಗ್ಯ ಸಮಸ್ಯೆಗಳು ಬರುತ್ತಿವೆ ಎಂದು ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆಗೆ ತಾರ್ಕಿಕ ಅಂತ್ಯ ದೊರೆತಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಣಬೆ ಫ್ಯಾಕ್ಟರಿ ಘಟಕವನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ಅಣಬೆ ಫ್ಯಾಕ್ಟರಿಯಿಂದಾಗಿ ದುರ್ವಾಸನೆಯಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದ್ದು, ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಶ್ವಾಸಕೋಶ ತೊಂದರೆ, ತಲೆನೋವು, ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ಹಾಗಾಗಿ ಈ ಘಟಕ ಮುಚ್ಚುವ ಕುರಿತಂತೆ ದ.ಕ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಅಣಬೆ ಕಾರ್ಖಾನೆಯ ಕಾರ್ಯಾಚರಣೆಯಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ ಈ ಪ್ರದೇಶದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂಬ ಮನವಿಯನ್ನು ನಾನು ಕೇಳಿದ್ದೇನೆ. ಅಗತ್ಯ ಮಾಹಿತಿ ಮತ್ತು ವರದಿಗಳನ್ನು ಸ್ವೀಕರಿಸಿದ್ದು, ಅದನ್ನು ಆಧರಿಸಿ ಕೂಡಲೇ ಘಟಕ ಮುಚ್ಚುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.
ಹಲವು ದಿನಗಳ ಪ್ರತಿಭಟನೆಯು ತಾರ್ಕಿಕ ಅಂತ್ಯ ಕಂಡಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದಾಗ್ಯೂ, ಆದೇಶದ ಪ್ರತಿ ಕೈಗೆ ದೊರಕುವವರೆಗೂ ಸ್ಥಳವನ್ನು ಬಿಟ್ಟು ತೆರಳುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.