ಉಡುಪಿ: ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಫೇಸ್ ಬುಕ್ ಪೋಸ್ಟ್, ಚರ್ಚೆ ಮೂಲಕ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಇದರಲ್ಲಿ ಸಮಾಜ ಘಾತುಕಶಕ್ತಿಗಳ ಷಡ್ಯಂತ್ರ, ಕುಮ್ಮಕ್ಕು ಕಂಡುಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಘಟನೆ ಸಂಪೂರ್ಣ ನಿಯಂತ್ರಣದಲ್ಲಿದೆ. ಸ್ಥಳದಲ್ಲಿ ಶಾಂತಿ ಕಾಪಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
*ಮೂರು ಸಿಆರ್ ಪಿಎಫ್ ಪಡೆ ನಿಯೋಜನೆ*
ಘಟನೆ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಜತೆಗೆ ಮಾತುಕತೆ ನಡೆಸಲಾಗಿದೆ. ಅವರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಘಟನಾಸ್ಥಳದಲ್ಲಿ ಭದ್ರತೆ ಹೆಚ್ಚು ಮಾಡುವ ಸಲುವಾಗಿ ಹೈದರಾಬಾದ್, ಚೆನ್ನೈನಿಂದ ತಲಾ ಮೂರು ಸಿಆರ್ ಪಿಎಫ್ ಪಡೆಯನ್ನು ಕರೆಸಿಕೊಂಡು ನಿಯೋಜನೆ ಮಾಡಲಾಗುವುದು. ಸಿಸಿಟಿವಿ ದೃಶ್ಯಗಳನ್ನು ಇನ್ನಷ್ಟು ಜನರನ್ನು ಬಂಧಿಸಿ, ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಪತ್ತೆಹಚ್ಚಲಾಗುತ್ತದೆ ಎಂದಿದ್ದಾರೆ.
ಘಟನೆ ನಡೆದ ಮೂರು ಗಂಟೆಗಳಲ್ಲಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪೊಲೀಸರ ನೈತಿಕ ಸ್ಥೈರ್ಯ ಪ್ರಶ್ನಿಸುವ ಕೆಲಸ ಯಾರು ಮಾಡಬಾರದು ಹೇಳಿದ್ದಾರೆ.












