ಅಂದು, ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಎಂದು ಟೀಕಿಸಿದರು. ಇಂದು ಆ ಹುಡುಗಿಗೇ ಸನ್ಮಾನ ಮಾಡಿದರು :”ದಿವ್ಯಶ್ರೀ” ಅನ್ನೋ ನಾದಲೋಕದ ಕುವರಿಯ ಕತೆ

“ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಚೆಂಡೆ ಬಾರಿಸ್ತಾಳಾ. ಹುಡುಗಿಯರು ಇಂತದಕ್ಕೆಲ್ಲಾ ಹೋದ್ರೆ ಹಾಳಾಗ್ತಾರೆ ಅಷ್ಟೆ” ಎಂದು ತನ್ನನ್ನು ಪರೋಕ್ಷವಾಗಿ ಮೂದಲಿಸಿದ ಧ್ವನಿಗಳಿಗೆ ಸವಾಲು ಹಾಕಿ ಬೆಳೆದ ಈ ಹುಡುಗಿ, ಕ್ರಮೇಣ ಅಪ್ರತಿಮ ಚೆಂಡೆ ಸಾಧಕಿಯಾಗುತ್ತಾಳೆ. ವಿದೇಶ ನೆಲದಲ್ಲಿಯೂ ಕಾರ್ಯಕ್ರಮ ಕೊಡುತ್ತಾಳೆ. ಈಗ ಆವತ್ತು, “ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ ?”ಅಂತ ಟೀಕಿಸಿದ ಧ್ವನಿಗಳೇ, “ಅಬ್ಬಾ ಎಂಥಾ ಚೆಂಡೆ ಬಾರಿಸ್ತಾಳೆ ಈ ಹುಡುಗಿ, ಗ್ರೇಟ್ ಅನ್ನುತ್ತಿದ್ದಾರೆ. ಅವರೇ ಸನ್ಮಾನ ಮಾಡುತ್ತಿದ್ದಾರೆ.

 ತನ್ನ ವಿಭಿನ್ನ ಶೈಲಿಯ ಚೆಂಡೆಯ ಸದ್ದಿನಲ್ಲಿಯೇ ಸಾವಿರಾರು ಜನರನ್ನು ಮೋಡಿ ಮಾಡಿದ ಈ ಚೆಂಡೆ ಸಾಧಕಿಯ ಹೆಸರು ದಿವ್ಯಶ್ರೀ ಸುಬ್ರಹ್ಮಣ್ಯ ರಾವ್. ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಹುಟ್ಟಿದ ಈ ಕರಾವಳಿಯ ಹೆಮ್ಮೆಯ ಪ್ರತಿಭೆ ನಾರಾಯಣ ನಾಯಕ್ , ಪ್ರೇಮಾ ನಾಯಕ್ ದಂಪತಿಯ ಪುತ್ರಿ.

ಮನೆಯೇ ಮೊದಲ ಪಾಠ ಶಾಲೆ:

 ಈ ಹುಡುಗಿಯ ಕುಟುಂಬದಲ್ಲಿಯೇ ಯಕ್ಷಗಾನದ ನಂಟಿತ್ತು. ಇವರ ತಂದೆ ಕೂಡ ಯಕ್ಷಗಾನ ಕಲಾವಿದರು. ಸ್ವತಃ ಮದ್ದಳೆಗಾರರು. ತಂದೆ ಮನೆಯಲ್ಲಿ ಇತರ ವಿದ್ಯಾರ್ಥಿಗಳಿಗೆ ಚೆಂಡೆ ಕಲಿಸುವುದನ್ನು ನೋಡಿ ದಿವ್ಯಶ್ರೀ ಕೂಡ   ಚೆಂಡ ಸದ್ದಿನತ್ತ ಆಕರ್ಷಿತರಾದರು. ಮಗಳ ಈ ಆಸಕ್ತಿಯನ್ನು ನೋಡಿ, ತಂದೆ ಸ್ವತಃ ಮಗಳಿಗೆ ಮದ್ದಳೆ, ಚೆಂಡೆ ಕಲಿಸಿದರು. ಹೀಗೆ ತಂದೆಯೇ ಮೊದಲ ಗುರುವಾದರು. ಮುಂದೆ ದಿವ್ಯಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ  ಪಾಠ ಕಲಿತರು. ಕಾರ್ಯಕ್ರಮಗಳನ್ನು ಕೊಟ್ಟರು. ಕಾಲೇಜು ಶಿಕ್ಷಣ ಪೂರೈಸಿದ ಬಳಿಕ ಮದುವೆಯಾದರೂ ಇವರ ಕಲಾಸೇವೆ ಅಂತ್ಯವಾಗದೆ , ಇನ್ನಷ್ಟು ಸ್ಫೂರ್ತಿಯಿಂದ ಬೆಳೆಯಿತು.. ಪತಿಯ ಜೊತೆ   ಬಿ. ಜಯಶ್ರೀ ಅವರ ಸ್ಪಂದನ ತಂಡದೊಂದಿಗೆ ಸೇರಿ ಅನೇಕ ರಂಗಗೀತೆ  ಕಾರ್ಯಕ್ರಮಕ್ಕೆ ತಮ್ಮ ವಾದ್ಯ ಪರಿಕರಗಳ ಕೈಚಳಕ ತೋರಿದ್ದಾರೆ.

ಪತಿಯಿಂದ ಪ್ರಸ್ತುತ ದೋಲಕ್ , ಖಂಜರಾವನ್ನು ಕಲಿಯುತ್ತಿದ್ದಾರೆ. ಗುರು ವಿದ್ವಾನ್ ಕಾಂಚನ ಈಶ್ವರ್ ಭಟ್ ಮಂಗಳೂರು ಇವರ ಮೂಲಕ ಮೃದಂಗದಲ್ಲಿ ಜೂನಿಯರ್ ಗ್ರೇಡ್  ಮುಗಿಸಿದ್ದಾರೆ. ಆಕಾಶವಾಣಿಯಲ್ಲಿ ಬಿ ಗ್ರೇಡ್ ಕಲಾವಿದೆಯಾಗಿ ದಿವ್ಯಶ್ರೀ. ದಿವ್ಯ ಛಾಪು ಮೂಡಿಸಿದ್ದಾರೆ.  ಪತಿ ಸುಬ್ರಹ್ಮಣ್ಯ ರಾವ್  ಕೂಡ ಕಲಾವಿದರಾಗಿರುವುದರಿಂದ ಇವರ ಬಾಳು ಕಲಾ ಸೇವೆಯಲ್ಲಿಯೇ ಬೆಳಗಿದೆ.

ವಿದೇಶದಲ್ಲೂ ಮೂಡಿತು ನಾದ ತರಂಗ;

ದಿವ್ಯಶ್ರೀ ಅವರ ಸಾಧನೆಗೆ ಸಂದ ಗೌರವ , ಪ್ರಶಸ್ತಿ ಹಲವು.” ಯಕ್ಷಗಾನ ರಂಗದ  ಪ್ರಥಮ ಮಹಿಳಾ ಚೆಂಡೆ ವಾದಕಿ  ” ಕಲಾರತ್ನ ” , ” ಪ್ರತಿಭಾರತ್ನ ” ಮೊದಲಾದ ಪುರಸ್ಕಾರ ಲಭಿಸಿದೆ. ದುಬೈ , ಅಬುದಾಭಿ , ಬಹರೈನ್ ನಂತಹ ವಿದೇಶಿ ನೆಲದಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿಯೂ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.

“ನನ್ನ ಎಲ್ಲಾ ಏಳಿಗೆಗೂ ಕಾರಣ  ನಮ್ಮ ಕುಟುಂಬ, ಅಪ್ಪ ,ಅಮ್ಮ , ಅಕ್ಕ , ಪತಿ , ಅತ್ತೆ , ಮಾವ  ಇವರೇ ನನ್ನ ಶಕ್ತಿ.

 ಬಲಿಪ ಭಾಗವತರು, ಪಟ್ಲ ಸತೀಶ್ ಶೆಟ್ಟಿ , ಶ್ರೀನಿವಾಸ ಬಳ್ಳಮಂಜ   ಇವರೆಲ್ಲಾ ನನಗೆ ದೊಡ್ಡ ಸ್ಪೂರ್ತಿ” ಎನ್ನುತ್ತಾರೆ ದಿವ್ಯಶ್ರಿ.

ಒಟ್ಟಾರೆ ದಿವ್ಯಶ್ರೀ ಅವರ ಕಲಾಸೇವೆ. ಇತರ ಮಹಿಳೆಯರಿಗೂ,ಕಲಾವಿದರಿಗೂ ಸ್ಪೂರ್ತಿ. ಅವರ ಕಲಾ ಪಯಣ ನಿರಂತರವಾಗಿರಲಿ ಎನ್ನುವುದು ನಮ್ಮ ಹಾರೈಕೆ.

 

ಬರಹ :ಮಂಜುನಾಥ ಶೆಣೈ