ಕುಂದಾಪುರ: ಇಲ್ಲಿನ ಮೂವತ್ತುಮುಡಿ ಬಸ್ ನಿಲ್ದಾಣ ಬಳಿಯ ಡಿವೈಡರ್ ಮುಚ್ಚಿರುವುದನ್ನು ವಿರೋಧಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಹೆದ್ದಾರಿ ಗುತ್ತಿಗೆ ಕಂಪೆನಿ ಮುಚ್ಚಿರುವ ಡಿವೈಡರ್ ಅನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಕುಂದಾಪುರ – ಕಾರವಾರ ಚತುಷ್ಪಥ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಕಂಪೆನಿಯು ಜನರಿಗೆ ಮಾಹಿತಿ ನೀಡದೆ ಡಿವೈಡರ್ ಅನ್ನು ಮುಚ್ಚಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಮಂಗಳವಾರ ಸಂಜೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳೀಯರ ದಿಢೀರ್ ಪ್ರತಿಭಟನೆಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಚೆನ್ನಯ್ಯ ಹಾಗೂ ಐಆರ್‌ಬಿ ಅಕಾರಿ ತಾಳ್ವೇಕರ್ ಸ್ಥಳಕ್ಕಾಗಮಿಸಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದರು. ಕ್ರಾಸಿಂಗ್ ನೀಡುವ ಬಗ್ಗೆ ಪಂಚಾಯತ್‌ನಿಂದ ಪತ್ರ ಬರೆದು ಮೇಲಾಧಿಕಾರಿಗಳಿಗೆ ಕಳುಹಿಸಲು ಸೂಚನೆ ನೀಡಿದ್ದರು.
ಇದೀಗ ಸ್ಥಳೀಯರ ಪ್ರತಿಭಟನೆಗೆ ಮಣಿದಿರುವ ಹೆದ್ದಾರಿ ಗುತ್ತಿಗೆ ಕಂಪೆನಿ ಡಿವೈಡರ್ ಅಗೆದು, ಕ್ರಾಸಿಂಗ್‌ಗೆ ಅವಕಾಶ ನೀಡಿದ್ದಾರೆ. ಆದರೆ ಇದು ತಾತ್ಕಲಿಕವಾಗಿದೆ. ಸರ್ವಿಸ್ ರಸ್ತೆ ನಿರ್ಮಾಣವಾಗುವವರೆಗೆ ಮಾತ್ರ ಇಲ್ಲಿ ಕ್ರಾಸಿಂಗ್‌ಗೆ ಅವಕಾಶ ನೀಡಲಾಗಿದ್ದು, ಆ ಬಳಿಕ ಮತ್ತೆ ಮುಚ್ಚಲಾಗುವುದು ಎಂದು ಐಆರ್‌ಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.