ಉಡುಪಿ: ಜಿಲ್ಲೆಯ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯದ ಅಂಗವಾಗಿ ಜಿಲ್ಲೆಗೆ ಭೇಟಿ ನೀಡಿದ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕ ಹಾಗೂ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ 8122 ಮಂದಿ ಯುವ ಮತದಾರರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಯುವ ಮತದಾರರ ಸೇರ್ಪಡೆ ಕಾರ್ಯವನ್ನು ಚುನಾವಣಾ ಆಯೋಗವು ವರ್ಷದಲ್ಲಿ ನಿಗದಿಪಡಿಸಿರುವ ನಿಗದಿತ ದಿನಾಂಕಗಳಂದು ನೋಂದಣಿ ಮಾಡಲು ಆದ್ಯತೆ ನೀಡುವಂತೆ ಹೇಳಿದರು.
ಪ್ರಸ್ತುತ ಪರಿಷ್ಕರಣೆ ಅವಧಿಯಲ್ಲಿ ಮತದಾರರ ಸೇರ್ಪಡೆ, ತಿದ್ದುಪಡಿ ಕುರಿತ ಎಲ್ಲಾ ಸಂಕ್ಷಿಪ್ತ ವಿವರಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡುವಂತೆ ತಿಳಿಸಿದ ಅವರು, ಪರಿಷ್ಕರಣೆ ಅವಧಿಯಲ್ಲಿ ಸಾರ್ವನಿಕರಿಂದ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ, ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಹಾಗೂ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಎಲ್ಲಾ ತಾಲೂಕುಗಳ ತಹಶೀಲ್ದಾರ್ಗಳು ಉಪಸ್ಥಿತರಿದ್ದರು.
ಕಾಪು ವಿಧಾನಸಭಾ ಕ್ಷೇತ್ರದ ನಾಡ್ಸಾಲು ಮತ್ತು ಬಡಾ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿದ ಮತದಾರರ ಪಟ್ಟಿಯ ವೀಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಡಿಸೆಂಬರ್ 23 ರಂತೆ, 4,90,062 ಪುರುಷರು, 5,26,161 ಮಹಿಳೆಯರು, 12 ತೃತೀಯ ಲಿಂಗಿಗಳು ಸೇರಿದಂತೆ 10,16,235 ಮಂದಿ ಮತದಾರರು ಇದ್ದಾರೆ.